ಚಂಡೀಗಢ : ರೈತ ಹೋರಾಟದ ವೇಳೆ ರೈತರನ್ನು ನಿಂದಿಸಿ, ರೈತ ಸಮುದಾಯದ ಆಕ್ರೋಶಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟದ ಮಿತ್ರಪಕ್ಷವಾದ ಜೆಜೆಪಿ ಶಾಸಕ ದೇವೇಂದ್ರ ಸಿಂಗ್ ಬಬ್ಲಿ ರೈತರ ಕ್ಷಮೆ ಯಾಚಿಸಿದ್ದಾರೆ. ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ನಡೆಯುತ್ತಿದ್ದ ಹರ್ಯಾಣದ ತೊಹನ ಪಟ್ಟಣದಲ್ಲಿ ಶಾಸಕ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಈ ಘಟನೆಯಲ್ಲಿ ಭಾಗವಹಿಸಿದವರನ್ನು ಕ್ಷಮಿಸುತ್ತೇನೆ ಹಾಗೂ ಜನ ಪ್ರತಿನಿಧಿಯಾಗಿ ಬಳಸಬಾರದ ಪದವನ್ನು ಬಳಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಇದಕ್ಕೆ ನಾನು ವಿಷಾಧಿಸುತ್ತಿದ್ದೇನೆ ಮತ್ತು ಕ್ಷಮೆ ಕೇಳುತ್ತಿದ್ದೇನೆ ಎಂದು ಪ್ರತಿಭಟನಾ ನಿರತ ರೈತರ ಜೊತೆ ಮಾತುಕತೆಯ ವೇಳೆ ಶಾಸಕ ಬಬ್ಲಿ ಹೇಳಿದ್ದಾರೆ.
ಶಾಸಕರ ಕ್ಷಮೆಯನ್ನು ರೈತ ಮುಖಂಡ ರಾಜೇಶ್ ಟಿಕಾಯತ್ ಸ್ವೀಕರಿಸಿದ್ದು, ಶಾಸಕರು ಕ್ಷಮೆ ಯಾಚಿಸಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ರೈತರು ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.