ರಾಂಚಿ: ಬಿಜೆಪಿ ಶಾಸಕರ ಭಾರೀ ವಿರೋಧದ ನಡುವೆ ಜಾರ್ಖಂಡ್ ವಿಧಾನಸಭೆಯಲ್ಲಿ ಗುಂಪು ಹಿಂಸಾಚಾರ ಮತ್ತು ಹತ್ಯೆ ತಡೆ ಮಸೂದೆ 2021 ಅನ್ನು ಅಂಗೀಕರಿಸಲಾಗಿದೆ. ನೂತನ ಮಸೂದೆಯನ್ವಯ ತಪ್ಪಿತಸ್ಥರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂಪಾಯಿ ದಂಡವನ್ನು ನಿಗದಿಪಡಿಸಿದೆ.
ಪಶ್ಚಿಮ ಬಂಗಾಳ, ರಾಜಸ್ಥಾನದ ಬಳಿಕ ಜಾರ್ಖಂಡ್ ಈಗ ಗುಂಪು ಹತ್ಯೆ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ಭಾರತದ ಮೂರನೇ ರಾಜ್ಯವಾಗಿದೆ.
ಈ ಮಸೂದೆಯು ಸಾಂವಿಧಾನಿಕ ಹಕ್ಕುಗಳ ಪರಿಣಾಮಕಾರಿ ರಕ್ಷಣೆ ಮತ್ತು ಗುಂಪು ಹಿಂಸಾಚಾರವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ತಿಳಿಸಿದ್ದಾರೆ.
ನೂತನ ಮಸೂದೆಯನ್ವಯ ಪೊಲೀಸ್ ಮಹಾನಿರ್ದೇಶಕರು ನೋಡಲ್ ಅಧಿಕಾರಿಯನ್ನು ನೇಮಿಸುತ್ತಾರೆ. ಗುಂಪುಹತ್ಯೆ ತಡೆಗಟ್ಟುವಿಕೆಯ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಾಗಲು ಐಜಿಪಿ ಶ್ರೇಣಿಗೆ ಸಮಾನವಾದ ನೋಡಲ್ ಅಧಿಕಾರಿಯನ್ನು ರಾಜ್ಯ ಕೋ – ಆರ್ಡಿನೇಟರ್ ಆಗಿ ನೇಮಿಸಿಕೊಳ್ಳಲಿದೆ.
ಸಂಘಪರಿವಾರ ರಾಜ್ಯದಲ್ಲಿ ಮುಸ್ಲಿಮ್, ದಲಿತ, ಆದಿವಾಸಿ ಮತ್ತು ಇತರ ಸಮುದಾಯಗಳನ್ನು ಗುರಿಯಾಗಿಸಿ ನಿರಂತರ ಗುಂಪು ಹಿಂಸಾಚಾರವನ್ನು ನಡೆಸುತ್ತಿದ್ದು, ಈ ಮಸೂದೆಯನ್ವಯ ಗುಂಪು ಹಿಂಸೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.