ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಎಎಪಿ ಸೇರ್ಪಡೆ

Prasthutha|

ಬೆಂಗಳೂರು: ಜನಪರ ಹೋರಾಟ, ಸಮಾಜಸೇವೆ ಮೂಲಕ ಮನೆಮಾತಾಗಿರುವ ಹಾಸನದ ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ರವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

- Advertisement -

ಎಎಪಿಯ ರಾಜ್ಯ ಕಚೇರಿಯಲ್ಲಿ ಅಗಿಲೆ ಯೋಗೀಶ್ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ವಿವಿಧ ಪಕ್ಷಗಳ ಪ್ರಾಮಾಣಿಕ ನಾಯಕರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಆಮ್ ಆದ್ಮಿ ಪಾರ್ಟಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅಗಾಧ ಸಮಾಜಸೇವೆಯಿಂದ ಹಾಸನ ಜಿಲ್ಲೆಯಲ್ಲಿ ಹೆಸರು ಮಾಡಿರುವ ಅಗಿಲೆ ಯೋಗೀಶ್ ರವರ ಸೇರ್ಪಡೆಯಿಂದಾಗಿ ಆ ಭಾಗದಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ” ಎಂದು ಹೇಳಿದರು.

ಎಎಪಿ ಸೇರಿದ ಬಳಿಕ ಮಾತನಾಡಿದ ಅಗಿಲೆ ಯೋಗೀಶ್, “ರಾಜ್ಯವನ್ನಾಳಿದ ಮೂರು ಪಕ್ಷಗಳು ಕೂಡ ಭ್ರಷ್ಟಾಚಾರರಹಿತ ಆಡಳಿತ ನೀಡುವುದರಲ್ಲಿ ವಿಫಲವಾಗಿವೆ. ಹಾಸನ ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಲು ತೀವ್ರ ನಿರ್ಲಕ್ಷ್ಯ ತೋರಿವೆ. ಇದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಜನರು ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಬೇಕು” ಎಂದು ಹೇಳಿದರು.

- Advertisement -

ಆಮ್ ಆದ್ಮಿ ಪಾರ್ಟಿಯ  ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಹಲವು ನಾಯಕರು ಹಾಗೂ ಅಗಿಲೆ ಯೋಗೀಶ್ ರವರ ಅನೇಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Join Whatsapp