ಟಿ20 ವಿಶ್ವಕಪ್‌ ಟೂರ್ನಿಯಿಂದ ಜಸ್‌ಪ್ರೀತ್‌ ಬುಮ್ರಾ ಔಟ್‌ !

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಗುವ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ, ಮತ್ತೆ ತೀವ್ರ ಬೆನ್ನು ನೋವಿಗೆ ತುತ್ತಾಗಿದ್ದು ವಿಶ್ವಕಪ್ ಟೂರ್ನಿಗೆ ಅಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

ಅಭ್ಯಾಸ ನಡೆಸುತ್ತಿದ್ದ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರು ಮೈದಾನ ತೊರೆದಿದ್ದಾರೆ. ಮೂಲಗಳ ಪ್ರಕಾರ ಬುಮ್ರಾ ಬೆನ್ನು ನೋವು ತೀವ್ರ ತರದ್ದಾಗಿದ್ದು, ಮುಂದಿನ 4ರಿಂದ 5 ತಿಂಗಳುಗಳ ಕಾಲ ಕ್ರಿಕೆಟ್‌ ಮೈದಾನದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

- Advertisement -

ಜುಲೈನಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಬೆನ್ನು ನೋವಿಗೆ ತುತ್ತಾಗಿದ್ದ ಜಸ್‌ಪ್ರೀತ್‌ ಬುಮ್ರಾ, ತಂಡದಿಂದ ಹೊರಗುಳಿದಿದ್ದರು. ಬಳಿಕ  ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು. ಈ ನಡುವೆ ನಡೆದ ಏಷ್ಯಾಕಪ್‌ನಲ್ಲೂ ಬುಮ್ರಾ ಭಾಗವಹಿಸರಲಿಲ್ಲ.

ಆದರೆ ವಿಶ್ವಕಪ್‌ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವಸರವಾಗಿ ಬಿಸಿಸಿಐ ಆಯ್ಕೆ ಸಮಿತಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬುಮ್ರಾರನ್ನು ಆಯ್ಕೆ ಮಾಡಿತ್ತು. ಆಸೀಸ್‌ ವಿರುದ್ಧ ಎರಡು ಪಂದ್ಯಗಳನ್ನಾಡಿದ್ದ ಬುಮ್ರಾ 6 ಓವರ್‌ ಎಸೆದು 73 ರನ್‌ ನೀಡಿ ದುಬಾರಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಪಂದ್ಯದಿಂದಲೂ ಬುಮ್ರಾ ಹೊರಗುಳಿದಿದ್ದರು.

ಬಿಸಿಸಿಐ ಮಾಡಿದ ಎಡವಟ್ಟಿಗೆ ಇದೀಗ ತಕ್ಕ ಬೆಲೆ ತೆರಬೇಕಾಗಿದ್ದು, ಮಹತ್ವದ ವಿಶ್ವಕಪ್‌ ಟೂರ್ನಿಯಿಂದಲೇ ಡೀಮ್‌ ಇಂಡಿಯಾ ಬುಮ್ರಾ ಸೇವೆಯನ್ನುಕಳೆದುಕೊಳ್ಳುವಂತಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಡೆತ್‌ ಬೌಲಿಂಗ್‌ ವಿಭಾಗದ ದೌರ್ಬಲ್ಯ ಜಗಜ್ಜಾಹೀರಾಗಿತ್ತು. ಈ ನಡುವೆ ಬುಮ್ರಾ ಕೂಡ ತಂಡದಿಂದ ಹೊರಗುಳಿದಿರುವುದು ತಂಡವನ್ನು ಮತ್ತಷ್ಟು ಚಿಂತೆಗೆ ದೂಡಿದೆ.

ಇನ್‌ಸೈಡ್‌ ಸ್ಪೋರ್ಟ್ಸ್‌ ವರದಿಯ ಪ್ರಕಾರ, ಜಸ್‌ಪ್ರೀತ್‌ ಬುಮ್ರಾ ಸದ್ಯ ಬೆಂಗಳೂರಿನಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ. ವರದಿ ಬಂದ ಬಳಿಕ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಮುಖ ಆಲ್‌ರೌಂಡರ್‌ ರವೀಂದ್ರ ಜಡೇಜಾ ಈಗಾಗಲೇ ವಿಶ್ವಕಪ್‌ ತಂಡದಿಂದ ಹೊರನಡೆದಿದ್ದಾರೆ. ಇದರ ಬೆನ್ನಲ್ಲೇ ಬುಮ್ರಾ ಸಹ ಅಲಭ್ಯರಾಗಿರುರುವುದು ವಿಶ್ವಕಪ್‌ ತಯಾರಿಗೆ ತೀವ್ರ ಹಿನ್ನಡೆಯುಂಟುಮಾಡಿದೆ.