ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ಜಲಧಾರೆ ಯಾತ್ರೆ ಆರಂಭವಾಗಲಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

ಬೀದರ್: ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ಜಲಧಾರೆ ಯಾತ್ರೆ ಆರಂಭವಾಗಲಿದೆ. ಸುಮಾರು ಹದಿನೈದು ಜಲಧಾರೆ ರಥಗಳು ರಾಜ್ಯಾದ್ಯಂತ ಸಂಚರಿಸಲಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

- Advertisement -


ಬೀದರ್ ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ನೆಲ, ಜಲ ಸಂರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ. ನಾವು ಅಧಿಕಾರದಲ್ಲಿ ಇದ್ದಾಗ ಕೈಗೊಂಡ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯದ ಜನತೆಗೆ ತಿಳಿಸುವುದು, ನಮ್ಮ ಗುರಿಗಳನ್ನು ತಿಳಿಸಿ ಮುಂಬರುವ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.


ಪ್ರಾದೇಶಿಕ ಪಕ್ಷವಾಗಿ ನಮ್ಮ ಪಕ್ಷ ಮೊದಲಿನಿಂದಲೂ, ಜನತಾ ಪರಿವಾರದಿಂದ ಜಾತ್ಯಾತೀತ ಜನತಾದಳದವರೆಗೂ ನಮ್ಮ ಸರ್ಕಾರವಿದ್ದಾಗ ರೈತರ, ಬಡವರ ಪರವಾಗಿ ಕೆಲಸ ಮಾಡಿದ್ದೇವೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಅದರ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಅದರ ಬಗ್ಗೆ ಈಗಾಗಲೇ ರಾಜ್ಯದ ಜನತೆಗೆ ತಿಳಿದಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ರಾಜ್ಯದ ಪ್ರತಿಯೊಂದು ಭಾಗಕ್ಕೂ ನೀರಾವರಿ ಸೌಲಭ್ಯ ಒದಗಿಸಿಕೊಡುವ ಪ್ರಯತ್ನ ಅವರು ಮಾಡಿದ್ದಾರೆ. ಈ ಭಾಗದಲ್ಲಿ ನೀರಾವರಿ ಮಾಡಿರುವ ಶ್ರೇಯಸ್ಸು ದೇವೇಗೌಡರಿಗೆ ಸಲ್ಲುತ್ತದೆ ಎಂದರು.

- Advertisement -


ಹಿಂದೆ ಕಾಂಗ್ರೆಸ್ ನವ್ರು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಕಾರ್ಯಕ್ರಮ ಮಾಡಿ ಅಧಿಕಾರಕ್ಕೆ ಬಂದಿದ್ದರು. ಆದರೇ ಅಧಿಕಾರಕ್ಕೆ ಬಂದ ನಂತರ ಏನನ್ನೂ ಮಾಡಲಿಲ್ಲ. ಈಗ ಅಧಿಕಾರದಲ್ಲಿರುವ ಬಿಜೆಪಿಯವರು ನೀರಾವರಿಗೆ ಅದ್ಯತೆ ನೀಡಿಲ್ಲ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ, ನಮಗೆ ಪೂರ್ಣಪ್ರಮಾಣದ ಆಶೀರ್ವಾದ ಮಾಡಿದರೆ ನದಿಗಳ ಜೋಡಗೆ, ಶಾಶ್ವತ ಕುಡಿಯುವ ನೀರು, ಜಿಲ್ಲಾವಾರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಅದನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಜನತಾ ಜಲಧಾರೆ ಯಾತ್ರೆ ಆರಂಭಿಸುತ್ತಿದ್ದೇವೆಂದರು.


16ರಂದು ಜನತಾ ಜಲಧಾರೆ ಯಾತ್ರೆ ಆರಂಭ:
ಇದೇ ತಿಂಗಳು 16ನೇ ತಾರೀಖು ಬೆಳಗ್ಗೆ 10.30ಕ್ಕೆ ಮೈಸೂರುನಿಂದ ಬೀದರ್ ವರೆಗೆ ರಾಜ್ಯಾದ್ಯಂತ 15 ಜನತಾ ಜಲಧಾರೆ ಯಾತ್ರೆಯ ರಥಗಳು ಹದಿನೈದು ಸ್ಥಳಗಳಿಂದ ಏಕಕಾಲದಲ್ಲಿ ಸಾಗಲಿವೆ. ನಮ್ಮ ಭಾಗದಲ್ಲಿ ಮಾಂಜ್ರಾ ಸಂಗಮದಿಂದ ರಥ ಸಾಗಲಿದೆ. ಅದರಂತೆ ರಾಜ್ಯಾದ್ಯಂತ ರಥಗಳು ಸಾಗಲಿವೆ. ಬೀದರ್ ಜಿಲ್ಲೆಗೆ ಒಂದು ರಥ ನೀಡಿದ್ದಾರೆ. ನಾನು ಈಗಾಗಲೇ ಜನತಾ ಜಲಧಾರೆ ಯಾತ್ರೆಯ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಬೀದರ್ ನಿಂದ ಸಾಗುವ ರಥ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಕನಿಷ್ಠ ಹತ್ತು ದಿನಗಳ ಕಾಲ ಜಿಲ್ಲಾದ್ಯಂತ ಸಂಚಾರ ನಡೆಸಲಿದೆ. ರಾಜ್ಯದ ಸಮಗ್ರ ನೀರಾವರಿಗೆ ಮಹತ್ವ ನೀಡುವುದು ನಮ್ಮ ಆದ್ಯತೆಯಾಗಿದೆ. ನಾವು ಅಧಿಕಾರದಲ್ಲಿದ್ದಾಗ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡಿದ್ದೇವು‌. ಜಿಲ್ಲೆಯ 33 ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವು. ನೂತನ ಕೆರೆಗಳನ್ನು ನಿರ್ಮಿಸುವ ಯೋಜನೆ ಕೂಡ ರೂಪಿಸುವ ಉದ್ದೇಶವಿತ್ತು. ನಮ್ಮ ಸರ್ಕಾರ ಹೋದ ಬಳಿಕ ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಅದನ್ನು ಅಷ್ಟಕ್ಕೇ ನಿಲ್ಲಿಸಿದೆ.


ನಮಗೆ ಐದು ವರ್ಷಗಳ ಮಟ್ಟಿಗೆ ಸ್ವಂತ ಅಧಿಕಾರಕ್ಕೆ ಬರುವ ಶಕ್ತಿ ನೀಡಿದರೇ ನಾವು ಕೆಲಸ ಮಾಡಿ ತೋರಿಸುತ್ತೇವೆ. ನಾವು ಯಾವ್ಯಾವಾಗ ಅಧಿಕಾರಕ್ಕೆ ಬಂದಿದ್ದೇವೆ ಆಗಲೆಲ್ಲಾ ನೀರಾವರಿ ಯೋಜನೆಗಳಿಗೆ ಕೊಡುಗೆ ನೀಡಿದ್ದೇವೆ. ಜನತಾ ಜಲಧಾರೆ ರಥ ಎಲ್ಲಾ ಭಾಗದಲ್ಲಿ ಸಾಗಿ ಎಲ್ಲರ ಆಶೀರ್ವಾದ ತೆಗೆದುಕೊಂಡು ಬೆಂಗಳೂರಿಗೆ ಹೋಗಲಿದೆ. ಬೆಂಗಳೂರಿನಲ್ಲಿ ಎಲ್ಲಾ ಭಾಗದಿಂದ ಬರುವ ಹದಿನೈದು ರಥಗಳು ಒಂದು ಕಡೆಗೆ ಸೇರಲಿವೆ. ಬಳಿಕ ದೊಡ್ಡಮಟ್ಟದ ಕಾರ್ಯಕ್ರಮ ಮಾಡಲಾಗುತ್ತದೆ.


ಬೀದರ್ ಜಿಲ್ಲೆಗೆ ಕುಮಾರಸ್ವಾಮಿ ಆಗಮಿಸಲಿದ್ದಾರೆ:
ಬೀದರ್ ಜಿಲ್ಲಾದ್ಯಂತ ಸಂಚರಿಸುವ ರಥಕ್ಕೆ ಒಂದು ದಿನ ಕುಮಾರಸ್ವಾಮಿರವರು ಪೂಜೆ ಸಲ್ಲಿಸಲಿದ್ದಾರೆ‌. ಅವತ್ತು ರಾಜ್ಯದ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಆ ಮೂಲಕ ರಾಜ್ಯಕ್ಕೆ ಸಂದೇಶ ನೀಡಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸಲಾಗುತ್ತದೆ. ಒಂದೊಂದು ಹನಿ ನೀರು ಕೂಡ ನಮ್ಮ ರಾಜ್ಯದಲ್ಲಿ ಸದ್ಬಳಕೆಯಾಗಬೇಕು. ಎಲ್ಲೆಲ್ಲಿ ಅಣೆಕಟ್ಟು ನಿರ್ಮಿಸಲು, ಕೆರೆ ತುಂಬಿಸಲು ಸಾಧ್ಯವಾಗುತ್ತದೆ ಅಲ್ಲಲ್ಲಿ ಆ ಕೆಲಸಗಳನ್ನು ಮಾಡುವ ಉದ್ದೇಶ ನಮ್ಮದಾಗಿದೆ. ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ನವ್ರು ಏನು ಮಾಡಿದ್ದಾರೆ. ಸರ್ಕಾರದ ಒಂದಾದರೂ ಹಗರಣವನ್ನು ಬಯಲಿಗೆ ತಂದಿದ್ದಾರಾ.? ಬಿಜೆಪಿಯ ಬಿ ಟೀಮ್ ನಾವಾ.? ಅವರಾ.? ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು.

ನಾನು ಮಾತು ಕೊಡುತ್ತೇನೆ:
ಜನತಾ ಜಲಧಾರೆ ಮೂಲಕ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟರೆ ಬೀದರ್ ಜಿಲ್ಲೆಯ ಒಂದು ಹನಿ ನೀರ ವ್ಯರ್ಥವಾಗದೆ ಸದ್ಬಳಕೆಯಾಗುವಂತೆ ಮಾಡುವ ಕೆಲಸ ನಾನು ಮಾಡುತ್ತೇನೆ. ಅದಕ್ಕೆ ನಾನು ಬರವಸೆ ನೀಡುತ್ತೇನೆ. ಎಷ್ಟೇ ಸಾವಿರ ಕೋಟಿ ರೂ. ಖರ್ಚಾದರು ಕೂಡ ಆ ರೀತಿಯ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ. ನಮ್ಮದು ಕಾಂಗ್ರೆಸ್ ನ ಮೇಕೆದಾಟು ಕಾರ್ಯಕ್ರಮದ ಪರ್ಯಾಯ ಕಾರ್ಯಕ್ರಮವಲ್ಲ. ರಾಜ್ಯದ ಜನತೆಗೆ ನಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ.


ಜನತಾ ಜಲಧಾರೆ ಮೊದಲನೇ ಹಂತದ ಕಾರ್ಯಕ್ರಮವಾಗಿದೆ. ಇದಾದ ಬಳಿಕ ಪಂಚಸೂತ್ರಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಕುಮಾರಸ್ವಾಮಿರವರು ರಾಜ್ಯದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಆದರೇ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡುವ ಕೆಲಸ ಮಾಡಿದ್ದೇವೆ. ದೇಶದಲ್ಲಿಯೇ ಯಾರು ಮಾಡಲಾರದಷ್ಟು ರೈತರ ಸಾಲಮನ್ನಾ ನಾವು ಮಾಡಿದ್ದೇವೆ. ಬೀದರ್ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರದ ನೂರು ಕೋಟಿ ರೂ. ನಷ್ಟು ಸಾಲಮನ್ನಾ ಮಾಡಲಾಗಿದೆ.


ನಮ್ಮ ಪಕ್ಷ ಯಾರೊಂದಿಗೂ ಕೂಡ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮಿಷನ್123 ಯಶಸ್ವಿಗಾಗಿ ಈ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನತಾ ಸರ್ಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿಯ ಕೆಲವು ನಾಯಕರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಮೂಲ ಜನತಾದಳದವರು ಮರಳಿ ಪಕ್ಷಕ್ಕೆ ಬರಲಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ಸೇರಿದಂತೆ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಇದ್ದರು.

Join Whatsapp