ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ಪ್ರಧಾನಿ ಮೋದಿ ಇಂದು ರಾಜ್ಯಸಭೆಗೆ ಆಗಮಿಸಿದ ವೇಳೆ ಸಂಸದರು ಎದ್ದು ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ ಘಟನೆ ನಡೆದಿದೆ.
ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್ ನಗರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಪಿಯೂಶ್ ಗೋಯೆಲ್ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ. ಮೋದಿ ಬರುತ್ತಿದ್ದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯಸಭಾ ಸದಸ್ಯರು ಎದ್ದು ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ನೆಹರು ಅವರು ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಓದುವ ಮೂಲಕ ಕಾಂಗ್ರೆಸ್ಸಿಗರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ,,ವಿಶೇಷವಾಗಿ ಸರ್ಕಾರಿ ಸೇವೆಗಳಲ್ಲಿ. ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಯಾವುದನ್ನಾದರೂ ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ನೆಹರು ಪತ್ರದಲ್ಲಿ ಬರೆದಿರುವುದನ್ನು ಮೋದಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ಮತ್ತು ಅದರ ಚಿಂತನೆ ಹಳೆಯದಾಗಿದೆ ಮತ್ತು ಅದರ ಕೆಲಸವನ್ನು ‘ಹೊರಗುತ್ತಿಗೆ’ ನೀಡಿದೆ ಎಂದು ಟೀಕಿಸಿದರು. ಒಂದು ದೊಡ್ಡ ಪಕ್ಷದ ಇಂತಹ ಅವನತಿಯಿಂದ ನಾವು ಸಂತೋಷವಾಗಿಲ್ಲ ಮತ್ತು ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.