ಜಹಾಂಗೀರಪುರಿ ಹಿಂಸಾಚಾರ: ಅಪ್ರಾಪ್ತ ಮುಸ್ಲಿಮ್ ಬಾಲಕನನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಲು ಹೈಕೋರ್ಟ್ ಆದೇಶ

Prasthutha|

ನವದೆಹಲಿ: ಇತ್ತೀಚಿನ ರಾಮನವಮಿ ಶೋಭಾ ಯಾತ್ರೆಯ ವೇಳೆ ನಡೆದ ಜಹಾಂಗೀರಪುರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಅಪ್ರಾಪ್ತ ಮುಸ್ಲಿಮ್ ಬಾಲಕನನ್ನು ಬಾಲಪರಾಧ ನ್ಯಾಯಮಂಡಳಿ ಎದುರು ಹಾಜರುಪಡಿಸುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

- Advertisement -

ಬಂಧಿತನ ಸೊಸೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಬಂಧಿತ ಮುಹಮ್ಮದ್ ಅಸ್ಲಮ್ ಎಂಬಾತನನ್ನು ರೋಹಿಣಿ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅವರು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.

- Advertisement -

ಬಾಲಾಪರಾಧಿ ಕಾಯ್ದೆ 2015 ರಲ್ಲಿ ನಿಗದಿಪಡಿಸಿದ ಮಾರ್ಗಸೂಚಿಗೆ ವಿರುದ್ಧವಾಗಿ ಅಸ್ಲಮ್ ಎಂಬಾತನನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು.

ಕಳೆದ ವಾರ ಜಹಾಂಗೀರಪುರಿ ಎಂಬಲ್ಲಿ ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಸೀದಿಯ ಎದುರು ಅವಹೇಳಕಾರಿ ಘೋಷಣೆಗಳನ್ನು ಕೂಗಿ ಮಸೀದಿಯ ಮಿನಾರದ ಮೇಲೆ ಕೇಸರಿ ಧ್ವಜವನ್ನು ಹಾರಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗಲಭೆ ಉಂಟಾಗಿತ್ತು.

ಎಪಿಸಿಆರ್ ನೆರವಿನೊಂದಿಗೆ ಹಿರಿಯ ವಕೀಲರಾದ ತಾರಾ ನರುಲಾ, ತಮನ್ನಾ ಪಂಕಜ್, ಪ್ರಿಯಾ ವತ್ಸ್ ಮತ್ತು ದೀಕ್ಷಾ ದ್ವಿವೇದಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಸದ್ಯ ಅಪ್ರಾಪ್ತ ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 147, 148, 149, 186, 353, 332, 323, 427, 436, 307 ,120 B ಮತ್ತು ಶಸ್ತ್ರಾಸ್ತ್ರ ಕಾಯ್ದೆ 27ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಹಮ್ಮದ್ ಅಸ್ಲಮ್ ಅವರ ಕಾನೂನುಬಾಹಿರ ಬಂಧನ ಮತ್ತು ಚಿಕಿತ್ಸೆಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 17 ಜನರನ್ನು ಬಂಧಿಸಲಾಗಿದ್ದು, ಆ ಪೈಕಿ 14 ಮಂದಿ ಮುಸ್ಲಿಮರು ಎಂಬುದು ಗಮನಾರ್ಹ

Join Whatsapp