ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತರೂ, ನಂತರದ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡದ ವಿರುದ್ಧ ಭರ್ಜರಿಯಾಗಿ ಗೆಲುವು ದಾಖಲಿಸಿ ಕಮ್’ಬ್ಯಾಕ್ ಮಾಡಿದೆ. ಅದಾಗಿಯೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಸೆಮಿಫೈನಲ್ ಪ್ರವೇಶ ಅಫ್ಘಾನಿಸ್ತಾನ – ನ್ಯೂಜಿಲೆಂಡ್ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಸ್ಕಾಟ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಜಡೇಜಾ ಬಳಿಕ ಪತ್ರಿಕಾಗೋಷ್ಠಿಗೆ ಬಂದ ವೇಳೆ ಪತ್ರಕರ್ತರೊಬ್ಬರು, ನಿಮ್ಮ ತಂಡ ಸೆಮಿಫೈನಲ್ ಪ್ರವೇಶಿಸಬೇಕಾದರೆ ಅಫ್ಘಾನಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಬೇಕು. ಒಂದು ವೇಳೆ ನ್ಯೂಜಿಲೆಂಡ್ ಗೆದ್ದರೆ ನೀವು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಸಿಕೊಂಡ ಜಡೇಜಾ ನಗುಮುಖದಿಂದಲೇ, “ಇನ್ನೇನ್ ಮಾಡಕಾಗುತ್ತೆ, ಬ್ಯಾಗ್ ಪ್ಯಾಕ್ ಮಾಡಿ ಮನೆಗೆ ಹೋಗ್ತೀವಿ” ಎಂದಿದ್ದಾರೆ. ಜಡೇಜಾರ ಸಮಯಪ್ರಜ್ಞೆ ಹಾಗೂ ಹಾಸ್ಯ ಪ್ರಜ್ಞೆಯ ಉತ್ತರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸೂಪರ್-12 ಹಂತದ ಬಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾನುವಾರ ಅಬುಧಾಬಿಯಲ್ಲಿ ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಲೇಬೇಕಾಗಿದೆ. ಹೀಗಾದಲ್ಲಿ ರನ್’ರೇಟ್ ಆಧಾರದಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.