ಸುರತ್ಕಲ್ ಟೋಲ್ ಗೇಟ್ ಹೋರಾಟಕ್ಕೆ ಬೆಂಬಲ: ಐವನ್ ಡಿಸೋಜಾ

Prasthutha|

ಮಂಗಳೂರು: ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ಅಕ್ರಮವಾದುದು. ಅದನ್ನು ನಾಳೆ ತೆರವುಗೊಳಿಸುವ ಹೋರಾಟ ಸಮಿತಿ ಮತ್ತು ಸಾರ್ವಜನಿಕರ ಮುತ್ತಿಗೆಗೆ  ಬೆಂಬಲಿಸುವುದಾಗಿ ಮಾಜಿ ಶಾಸಕ ಐವನ್ ಡಿಸೋಜಾ ತಿಳಿಸಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಕ್ರಮ ಟೋಲ್ ಗೇಟ್ ಎಂದು ಹೆದ್ದಾರಿ ಸಚಿವ, ಸ್ಥಳೀಯ ಶಾಸಕ, ಸಂಸದರೆಲ್ಲ ಹೇಳಿದ್ದಾರೆ. ಇದನ್ನು ತೆಗೆಸುವುದಾಗಿ ಸಚಿವರೇ ಸಂಸತ್ತಿನಲ್ಲಿ ಹೇಳಿದ್ದರೂ ಇದನ್ನು ಇನ್ನೂ ತೆಗೆಯದಿರುವುದರ ಹಿಂದೆ ಇರುವ ಪಟ್ಟಭದ್ರ ಹಿತಾಸಕ್ತಿಗಳು ಯಾವುದು ? ಎಂದು ಉತ್ತರಿಸಬೇಕಾದುದು ಆಳುವವರ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.

ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಹಿಳೆಯೊಬ್ಬರು ಟೋಲ್ ಗೇಟ್ ವಿರುದ್ಧ ಮಾತನಾಡಿದರೆ ಅವರ ಮನೆಗೆ ಮಧ್ಯ ರಾತ್ರಿ ಹೋಗಿ ಪೋಲೀಸರು ಬೆದರಿಕೆ ಹಾಕಿದ್ದಾರೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ, ಮಾನವ ಹಕ್ಕುಗಳ ಉಲ್ಲಂಘನೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಟೋಲ್ ಗೇಟ್ ವಿರುದ್ಧ ಆಳುವ ಪಕ್ಷದವರು, ಪ್ರತಿ ಪಕ್ಷದವರು ಪ್ರತಿಭಟನೆ ಮಾಡಿದ್ದಾರೆ. ಎಂಟು ವರ್ಷಗಳಿಂದ ಈ ಟೋಲ್ ಗೇಟ್ನಿಂದ ಅಕ್ರಮವಾಗಿ 400 ಕೋಟಿಗೂ ಹೆಚ್ಚು ರೂಪಾಯಿ ದೋಚಿದ್ದಾರೆ. ಈ ಹಣದ ಲೆಕ್ಕ ಎಲ್ಲಿದೆ ಎಂದು ಐವಾನ್ ಕೇಳಿದರು.

- Advertisement -

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವಿರುದ್ಧ ನೋಟೀಸು ನೀಡಿದ್ದೀರಿ. ಕಾನೂನು ಬಾಹಿರವಾಗಿ ಬರೆದು ಕೊಡಲು ಕೇಳಿದ್ದೀರಿ. ಇದೇನು ಅಘೋಷಿತ ತುರ್ತು ಪರಿಸ್ಥಿತಿಯೆ? ನೀವು ಹೇಳಿದಂತೆ  ಟೋಲ್ ಗೇಟ್ ತೆಗೆಯಲು ಆಗದಿದ್ದರೆ ನೀವು ಆಳಲು, ಸಂಸದರಾಗಿರಲು ಅನರ್ಹರು. ಕೂಡಲೆ ರಾಜೀನಾಮೆ ನೀಡಿ. ನಾಳಿನ ಹೋರಾಟದಲ್ಲಿ ಕಾಂಗ್ರೆಸ್ ಸಹ ತೀವ್ರವಾಗಿ ಒಳಗೊಳ್ಳುತ್ತದೆ ಎಂದು ಐವಾನ್ ಡಿಸೋಜಾ ಹೇಳಿದರು.

ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇಂತಹ 19 ಅಕ್ರಮ ಟೋಲ್ ಗೇಟ್ ಇವೆ, ಅವುಗಳನ್ನು ತೆಗೆಯುತ್ತೇವೆ ಎಂದು ಸಂಸತ್ತಿನಲ್ಲಿ ಹೇಳಿದರೂ ತೆಗೆಯದಿರುವುದೇಕೆ? ಜಿಲ್ಲಾಧಿಕಾರಿ ಯಾಕೆ ಕ್ರಮ ತೆಗೆದುಕೊಳ್ಳತ್ತಿಲ್ಲ. ರಸ್ತೆ ಸಹ ಸರಿಯಾಗುತ್ತಿಲ್ಲ. ಸೀದಾ ಮತ್ತು ಅಕ್ರಮ ಹಣದಿಂದಲೂ ಎಲ್ಲ ಸರಿ ಕೆಲಸ ಆಗುವುದಿಲ್ಲವೆ ಎಂದು ಐವಾನ್ ಡಿಸೋಜಾ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಸಬಿತಾ ಮಿಸ್ಕಿತ್, ಸಾಹುಲ್ ಹಮೀದ್, ಪ್ರಕಾಶ ಸಾಲಿಯಾನ್, ಕಳ್ಳಿಗೆ ತಾರಾನಾಥ ಶೆಟ್ಟಿ, ಸಲೀಂ, ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.



Join Whatsapp