►ಮೊಟ್ಟೆ ಮತ್ತು ಮಾಂಸದ ಸೇವನೆ ಕೊಲೆಸ್ಟ್ರಾಲ್ ಮತ್ತು ಜೀವನಶೈಲಿಯ ಸಮಸ್ಯೆಗೆ ಕಾರಣವೆಂಬ ಪ್ರಸ್ತಾಪ
ನವದೆಹಲಿ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವೇಳೆ ಮೊಟ್ಟೆಗಳನ್ನು ನೀಡುವುದರಿಂದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಸೃಷ್ಟಿಯಾಗುತ್ತದೆ. ಮೊಟ್ಟೆ ಮತ್ತು ಮಾಂಸದ ನಿಯಮಿತ ಸೇವನೆಯಿಂದ ಉಂಟಾಗುವ ಕೊಲೆಸ್ಟ್ರಾಲ್, ಜೀವನಶೈಲಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬ ಹೊಸ ವಿವಾದವನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ರೂಪಿಸಲಾಗಿರುವ ‘ಆರೋಗ್ಯ ಮತ್ತು ಯೋಗಕ್ಷೇಮ’ದ ಪೊಷಿಷನ್ ಪೇಪರ್ ಪ್ರಸ್ತಾಪ ಮಾಡಿದೆ.
ಒಂದೇ ತರಗತಿಯ ಮಕ್ಕಳ ನಡುವೆ ವಿವಿಧ ರೀತಿಯ ಆಹಾರ ವಿತರಿಸುವುದರಿಂದ ಮಕ್ಕಳಲ್ಲಿ ಪೋಷಕಾಂಶಗಳ ವಿತರಣೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಉದಾಹರಣೆಗೆ ಮೊಟ್ಟೆ ಅಥವಾ ಕಾಳು, ಮೊಟ್ಟೆ ಅಥವಾ ಬಾಳೆಹಣ್ಣು ನೀಡುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಅಸಮತೋಲನ ಎದುರಾಗುತ್ತದೆ” ಎಂದು ಸಮಿತಿ ಪ್ರಸ್ತಾಪಿಸಿದೆ.
ಕಡಲೆಕಾಯಿ, ಎಳ್ಳುಂಡೆ, ಬೆಲ್ಲದಂತಹ ನೈಸರ್ಗಿಕ ಮತ್ತು ಸಾತ್ವಿಕ ಆಹಾರವನ್ನು ಮಕ್ಕಳಿಗೆ ನೀಡಬೇಕು. ಈ ಆಹಾರ ಕ್ರಮವು ಕುಂಠಿತ ಬೆಳವಣಿಗೆ ಮತ್ತು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ ಎಂಬುದು ಸಮಿತಿಯ ವಾದವಾಗಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಪ್ರೋಟೀನ್ ಕೊರತೆಯಿಂದ ಬಳಲುತ್ತಿರುವ 6 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಲಾಗಿದ್ದು, ಇದೀಗ ಸಮಿತಿಯ ಸಲಹೆಗಳು ಆತಂಕಕಾರಿಯಾಗಿವೆ.
ಇದಕ್ಕೆ ವಿರುದ್ದವಾಗಿ ಮೊಟ್ಟೆ ನೀಡುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದು, ಹಲವು ರೀತಿಯ ರೋಗಗಳು ಜನರನ್ನು ಬಾಧಿಸುತ್ತಿವೆ. ಇವೆಲ್ಲಕ್ಕೆ ಮೊಟ್ಟೆ ಅತ್ಯುತ್ತಮ ಪರಿಹಾರವಾಗಬಲ್ಲದು. ದೇಶದ ಬಹುಸಂಖ್ಯಾತರಿಗೆ ಮೊಟ್ಟೆ ತಿನ್ನುವುದು ಅಪಥ್ಯವೂ ಅಲ್ಲ. ಆದರೆ ಹುಸಿ ಶ್ರೇಷ್ಠತೆಯ ವ್ಯಸನ ಹತ್ತಿಸಿಕೊಂಡು, ಹುಸಿ ಸಾಂಸ್ಕೃತಿಕ ಮೇಲ್ಮೆಯನ್ನು ಪ್ರತಿಪಾದಿಸುವ ಚಿಂತನೆಗಳು ಇದಕ್ಕೆ ಅಡ್ಡಿಯಾಗಿವೆ. ಮಕ್ಕಳಿಗೆ ಮೊಟ್ಟೆಯನ್ನು ಕೊಡಲು ವಿರೋಧಿಸುವವರು ವಾಸ್ತವದಲ್ಲಿ ಜೀವವಿರೋಧಿಗಳಾಗಿದ್ದಾರೆ. ಇದು ಅರ್ಥವಾಗದೇ ವಿರೋಧಿಸುತ್ತಿರುವವರೂ ಇದ್ದಾರೆ, ಅರ್ಥವಾಗಿಯೂ ವಿರೋಧಿಸುತ್ತಿರುವವರು ಇದ್ದಾರೆ ಎಂದು ಹೇಳಿದ್ದಾರೆ.
ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಮೊಟ್ಟೆಗಳನ್ನು ನೀಡುತ್ತಿದ್ದಾರೆ. ಈ ರಾಜ್ಯಗಳಲ್ಲಿ ಮಕ್ಕಳ ಕುಪೋಷಣೆ ಇಡೀ ದೇಶದಲ್ಲೇ ಕನಿಷ್ಠ ಮಟ್ಟದಲ್ಲಿದೆ. ಮಕ್ಕಳಲ್ಲಿ ಕುಪೋಷಣೆ ಇಲ್ಲವೇ ಇಲ್ಲ ಅನ್ನುವ ಮಟ್ಟಕ್ಕೆ ಈ ರಾಜ್ಯಗಳು ಯಶಸ್ಸು ಪಡೆದಿವೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.