ಬೆಂಗಳೂರು: ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಡ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಯೋಜಿಸಿದ್ದ “ನೀನಲ್ಲದೆ ಮತ್ತಾರೂ ಇಲ್ಲವಯ್ಯಾ” ಎಂಬ ದೇಶದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರಕ್ಕೆ ಹಿಂದಿನ ಸಿಎಂಗಳು ಹೋಗುತ್ತಿರಲಿಲ್ಲ. ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಸಿಎಂ ಸ್ಥಾನ ಹೋಗಿಬಿಡುತ್ತದೆ ಎಂದು ಅವರು ನಂಬುತ್ತಿದ್ದರು. ನಾನು 12 ಸಲ ಚಾಮರಾಜನಗರಕ್ಕೆ ಭೇಟಿ ಕೊಟ್ಟೆ. 12 ಸಲ ಭೇಟಿ ಮಾಡಿ ಎರಡನೇ ಸಲ ಮತ್ತೆ ಸಿಎಂ ಆದೆ. ಅವರೆಲ್ಲ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರಿಂದ ಸಿಎಂ ಸ್ಥಾನ ಕಳೆದುಕೊಳ್ಳಲಿಲ್ಲ. ಬದಲಾಗಿ ರಾಜಕೀಯ ಕಾರಣಕ್ಕೆ ಸಿಎಂ ಸ್ಥಾನ ಕಳೆದುಕೊಂಡರು. ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಸಿಎಂ ಸ್ಥಾನ ಹೋಗುತ್ತದೆ ಎನ್ನುವುದು ಮೂಢನಂಬಿಕೆ ಎಂದು ವಿವರಿಸಿದರು.
ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ವಿದ್ಯಾವಂತರಲ್ಲೇ ಜಾತಿ ತಾರತಮ್ಯ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲೇ ಇಂತಹ ಮೌಢ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾಗೃತಿ ಮೂಡಿಸಿದ್ದರು. ಶಿಕ್ಷಣ ದೊರೆತರೆ ಜಾತಿ, ಮೌಢ್ಯ ಹೋಗುತ್ತದೆ ಎನ್ನುವ ಮಾತು ಸುಳ್ಳಾಗಿದೆ ಎಂದು ಹೇಳಿದರು.
ಬಸವಣ್ಣನವರು ಕನಸು ಕಂಡಿದ್ದ ಸಮಾಜ ನಿರ್ಮಾಣ ಆಗಬೇಕು. ಕಾಯಕ ಮತ್ತು ದಾಸೋಹ ಮೌಲ್ಯಗಳು ಹೆಚ್ಚಬೇಕು. ಕಾಯಕ ಎಂದರೆ ಉತ್ಪಾದನೆ. ದಾಸೋಹ ಅಂದರೆ ವಿತರಣೆ. ಹೀಗೆ ಸಮಾಜದ ಉತ್ಪಾದನೆ, ಸಮಾಜದ ಎಲ್ಲರಿಗೂ ವಿತರಣೆ ಆಗಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು. ಬಸವಾದಿ ಶರಣರ ಅನುಭವ ಮಂಟಪ ರಚಿಸಿದ್ದೇ ಈ ಕಾರಣಕ್ಕೆ. ಎಲ್ಲಾ ಜಾತಿ ವರ್ಗಗಳಿಗೂ ಸಮಾನವಾದ ಅವಕಾಶ ಮತ್ತು ಸ್ಥಾನಮಾನ ಕಲ್ಪಿಸುವ ಆಶಯ ಆಗಿನ ಪಾರ್ಲಿಮೆಂಟ್ ಆಗಿದ್ದ ಅನುಭವ ಮಂಟಪಕ್ಕೆ ಇತ್ತು. ಇದೇ ಆಶಯ ನಮ್ಮ ಸರ್ಕಾರದ್ದೂ ಆಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಶಾಸಕರಾದ ಶ್ರೀನಿವಾಸ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಕೊಂಡಜ್ಜಿ ಮೋಹನ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.