ಶ್ರೀಹರಿಕೋಟಾ: ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಇಂದು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಿದ ತನ್ನ ಚೊಚ್ಚಲ, ನೂತನ ರಾಕೆಟ್ Small Satellite Launch Vehicle ( SSLV -D1)ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
ಈ ರಾಕೆಟ್ ಭೂ ವೀಕ್ಷಣಾ ಉಪಗ್ರಹ (EOS -02) ಮತ್ತು ವಿದ್ಯಾರ್ಥಿ ನಿರ್ಮಿತ ಉಪಗ್ರಹ AzaadiSATನ್ನು ಒಳಗೊಂಡಿದ್ದು, ಇಂದು ಬೆಳಗ್ಗೆ ಉಡಾವಣೆಗೊಂಡಿದೆ.
“SSLV -D1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಿದೆ. ಆದರೆ ಟರ್ಮಿನಲ್ ಕಾರ್ಯಾಚರಣೆಯ ಹಂತದಲ್ಲಿ ಕೆಲವು ಡೇಟಾಗಳಲ್ಲಿ ನಷ್ಟ ಸಂಭವಿಸಿದೆ. ಸ್ಥಿರ ಕಕ್ಷೆಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕಾರ್ಯಾಚರಣೆಯ ಅಂತಿಮ ಫಲಿತಾಂಶವನ್ನು ತೀರ್ಮಾನಿಸಲು ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ.
ಸದ್ಯ ಈ ಎರಡೂ ಉಪಗ್ರಹಗಳು ಸ್ಥಿರ ಕಕ್ಷೆಗೆ ಸೇರಲು ಅರ್ಹವಾಗಿದೆಯೇ ಎಂದು ಇಸ್ರೋದ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಈ ವಿಚಾರ ಸ್ಪಷ್ಟವಾಗದ ಹೊರತು ಈ ಕಾರ್ಯಾಚರಣೆ ಯಶಸ್ವೀ ಎಂದು ಘೋಷಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ
ಈ ರಾಕೆಟ್ ಒಳಗೊಂಡಿದ್ದ AzaadiSAT ಉಪಗ್ರಹ, ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ 75 ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ 750 ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ಉಪಗ್ರಹವಾಗಿದ್ದು, ಇದು 75 ಪೇಲೋಡ್‌ಗಳನ್ನು ಒಳಗೊಂಡಿದೆ.