ಫೆಲೆಸ್ತೀನ್ ಸೇರಿದಂತೆ ಇತರ ಅರಬ್ ರಾಷ್ಟ್ರಗಳಿಂದ ಆಕ್ರೋಶ
ಅಬುಧಾಬಿ: ಗಲ್ಫ್ ಪ್ರದೇಶದಲ್ಲಿ ಮೊದಲ ರಾಯಭಾರ ಕಚೇರಿಯನ್ನು UAEಯಲ್ಲಿ ಇಸ್ರೇಲ್ ತೆರೆದಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಒಂದು ವರ್ಷದಲ್ಲಿ ರಾಯಭಾರ ಕಚೇರಿಯನ್ನು ತೆರೆಯಲಾಗಿದೆ.
UAE ರಾಜಧಾನಿ ಅಬುಧಾಬಿಯಲ್ಲಿ ಇಸ್ರೇಲಿ ರಾಯಭಾರಿ ಯೇರ್ ಲ್ಯಾಪಿಡ್, UAE ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಯಭಾರ ಕಚೇರಿಯ ಉದ್ಘಾಟನೆಯ ವೇಳೆ UAE ಸಚಿವ ನೂರಾ ಅಲ್ ಕಅಬಿ ಸಹ ಹಾಜರಿದ್ದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ರಾಯಭಾರ ಕಚೇರಿಯನ್ನು ತೆರೆಯುವುದರಿಂದ ಇಸ್ರೇಲ್, UAE ಮತ್ತು ಈ ಪ್ರದೇಶದ ಇತರ ದೇಶಗಳಿಗೆ ಅನುಕೂಲವಾಗಲಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಇಸ್ರೇಲ್ ತನ್ನ ನೆರೆ ರಾಷ್ಟ್ರಗಳೊಂದಿಗೆ ಸ್ನೇಹದಿಂದ ಮುಂದುವರಿಯಲು ಆಸಕ್ತಿ ಹೊಂದಿದೆ ಎಂದು ಇಸ್ರೇಲ್ ರಾಯಭಾರಿ ಯೇರ್ ಲ್ಯಾಪಿಡ್ ಈ ವೇಳೆ ಹೇಳಿದರು. ಪಶ್ಚಿಮ ಏಷ್ಯಾ ನಮ್ಮ ಮನೆ. ನಾವು ಬೇರೆಲ್ಲಿಯೂ ಹೋಗದೆ ಇಲ್ಲೇ ಇರುತ್ತೇವೆ. ಇದನ್ನು ಪಶ್ಚಿಮ ಏಷ್ಯಾದ ಎಲ್ಲಾ ದೇಶಗಳು ಅಂಗೀಕರಿಸಬೇಕು ಎಂದು ಲ್ಯಾಪಿಡ್ ಹೇಳಿದ್ದಾರೆ.
ಫೆಲೆಸ್ತೀನ್ ಸೇರಿದಂತೆ ಹಲವು ಅರಬ್ ರಾಷ್ಟ್ರಗಳು ಈ ನಡೆಯನ್ನು ಟೀಕಿಸಿದೆ. ‘ಇದೊಂದು ಭ್ರಮೆ’ ಎಂದು ಫೆಲೆಸ್ತೀನ್ ಈ ವೇಳೆ ಪ್ರತಿಕ್ರಿಯಿಸಿದೆ.