ಸಿರಿಯಾದ ರಾಜಧಾನಿ ಡಮಾಸ್ಕಸ್ ಸುತ್ತಮುತ್ತಲಿನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ ರಾತ್ರೋರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದು, ಏಳು ಮಂದಿ ಸೈನಿಕರು ಗಂಭೀರ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಮಧ್ಯರಾತ್ರಿಯ ಬಳಿಕ ಸಿರಿಯಾದ ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಸಿರಿಯನ್ ಸೇನೆಯು ವಾಯು ರಕ್ಷಣಾ ಕ್ಷಿಪಣಿಗಳೊಂದಿಗೆ ನಡೆಸಿದ ಪ್ರತಿದಾಳಿಯಲ್ಲಿ ಇಸ್ರೇಲ್‌ನ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ರಾಜ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು, ಮಧ್ಯ ಸಿರಿಯಾದ ಮೇಲೆ ಇಸ್ರೇಲಿ ವೈಮಾನಿಕ ಪಡೆ ನಡೆಸಿದ್ದ ದಾಳಿಯಲ್ಲಿ ಸೈನಿಕರು ಸೇರಿದಂತೆ 11 ಮಂದಿ ಮೃತಪಟ್ಟಿದ್ದರು.