ಆಕ್ಸಿಜನ್, ರೆಮಿಡಿಸಿವೀರ್ ಬಳಿಕ ಈಗ ಕೇಂದ್ರದಿಂದ ಮತ್ತೊಮ್ಮೆ ಅನ್ಯಾಯ : ಈಶ್ವರ್ ಖಂಡ್ರೆ ಆಕ್ರೋಶ

Prasthutha|

ಬೆಂಗಳೂರು: ಕೇಂದ್ರದಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ. ಪ್ರವಾಹ ಪರಿಹಾರ ನೀಡಿಕೆ, ಆಕ್ಸಿಜನ್, ರೆಮಿಡಿಸಿವೀರ್, ಆಂಪೋಟೆರಿಸಿನ್ ಬಿ,ಹಂಚಿಕೆ ಬಳಿಕ ಈಗ ಎಸ್.ಡಿ.ಆರ್.ಎಫ್. ಕಂತು ಬಿಡುಗಡೆಯಲ್ಲೂ ಅನ್ಯಾಯವಾಗಿದೆ. ರಾಜ್ಯದ ಬಿಜೆಪಿಯ 25 ಸಂಸದರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಡಿ ಕೇವಲ 316 ಕೋಟಿ ರೂ. ಮಾತ್ರ ನೀಡಿದೆ. ಆದರೆ ಮಹಾರಾಷ್ಟ್ರಕ್ಕೆ 1289 ಕೋಟಿ ರೂ., ಆಂಧ್ರಕ್ಕೆ 447 ಕೋಟಿ ರೂ. ತಮಿಳುನಾಡಿಗೆ 408 ಕೋಟಿ ರೂ. ಬಿಡುಗಡೆ ಮಾಡಿರುವ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂದು ಅವರು ಆರೋಪಿಸಿದ್ದಾರೆ.

ಸಣ್ಣ ರಾಜ್ಯ ಉತ್ತರಖಂಡಕ್ಕೇ ಕೇಂದ್ರ 375 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರದ ದೃಷ್ಟಿಯಲ್ಲಿ ಕರ್ನಾಟಕ ಅದಕ್ಕಿಂತ ಕಡೆಯಾಯಿತೇ, 2021-22ನೇ ಸಾಲಿಗೆ ರಾಜ್ಯಕ್ಕೆ SDRF ನಡಿ 1264 ಕೋಟಿ ರೂ. ಲಭಿಸಲಿದೆ. ಇದು ಕೋವಿಡ್ ನಿರ್ವಹಣೆಗಷ್ಟೇ ಅಲ್ಲ, ರಾಜ್ಯ ಎದುರಿಸಬಹುದಾದ ಇತರ ವಿಪತ್ತಿಗೂ ಅನ್ವಯಿಸುತ್ತದೆ. ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಕಳೆದ ವರ್ಷ ಪ್ರವಾಹದಿಂದ 24ಸಾವಿರ ಕೋಟಿ ರೂ. ನಷ್ಟವಾದರೂ ಕೇಂದ್ರ ಕೊಟ್ಟಿದ್ದು 577 ಕೋಟಿ ರೂ. ಮಾತ್ರ. ಆಗಲೂ ಬಾಯಿ ಬಿಡದೆ ಮೌನ ಧರಿಸಿದ್ದ ಸಂಸದರು, ಈಗಲೂ ಕೇಂದ್ರದ ಮುಂದೆ ಕೈಕಟ್ಟಿ ಗುಲಾಮತನ ತೋರುತ್ತಿದ್ದಾರೆ. ರಾಜ್ಯದ ಹಿತ ಚಿಂತನೆ ಇಲ್ಲದ ಇವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದಿದ್ದಾರೆ.

Join Whatsapp