Fact Check | ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆಂಬ ಪುಸ್ತಕ ಸೋನಿಯಾ ಗಾಂಧಿ ಲೈಬ್ರರಿಯಲ್ಲಿ?

Prasthutha|

ಸಮಾಜದಲ್ಲಿ ಸುಳ್ಳು ಹಾಗೂ ತಿರುಚಿದ ಸುದ್ದಿಗಳು ಅತಿ ವೇಗದಲ್ಲಿ ತಲುಪುತ್ತವೆ. ಕೆಲವರಿಗೆ ಇಂಥವುಗಳನ್ನು ಸೃಷ್ಟಿಸುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಅವರಿಗೆ ಸತ್ಯ ಎಂಬುದು ಅಪಥ್ಯ. ಆದರೆ ಸುಳ್ಳು ಯಾವತ್ತೂ ಹೆಚ್ಚು ಕಾಲ ಬಾಳದು.

- Advertisement -

ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇರುವ ವಿಡಿಯೋ ಮತ್ತು ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ, ಸೋನಿಯಾ ಗಾಂಧಿ ಕುಳಿತ ಕುರ್ಚಿಯ ಹಿಂದೆ ಪುಸ್ತಕದ ಕಪಾಟು ಒಂದಿದೆ. ಅವುಗಳಲ್ಲಿ ಹೋಲಿ ಬೈಬಲ್, ಅದರ ಕೆಳಗೆ ಯೇಸುವಿನ ಸಣ್ಣ ಚಿತ್ರ ಇದೆ. ಅಲ್ಲೇ ಸಮೀಪದಲ್ಲೇ “ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಇಂಗ್ಲಿಷ್ ಪುಸ್ತಕವೂ ಈ ಚಿತ್ರವನ್ನು ನೋಡುಗರ ಗಮನ ಸೆಳೆಯುತ್ತದೆ.

ಈ ಚಿತ್ರವನ್ನು ಯಾರು ಸೃಷ್ಟಿಸಿದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ಅದಕ್ಕಾಗಿಯೇ 2 ರೂ.ಯ ತಂಡ ತಯಾರಾಗಿರುತ್ತದೆ. ಚಿತ್ರ ಸಿಕ್ಕಿದ ಕೂಡಲೇ ಷೇರ್ ಮಾಡಲು ಕಾಯುತ್ತಿರುವ ಬಿಜೆಪಿಯ ನಾಯಕರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ ಚಿತ್ರ ಸಿಕ್ಕಿದ ಕೂಡಲೇ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸುಮತಿ ವೆಂಕಟೇಶ್, ಬಿಜೆಪಿ ಬೆಂಬಲಿಗರಾದ ರೇಣುಕಾ ಜೈನ್ ಷೇರು ಮಾಡಿ ವಿಕೃತ ಆನಂದ ಪಡೆದಿದ್ದಾರೆ. ಅದೇ ರೀತಿ ಪತ್ರಕರ್ತೆ ಹಾಗೂ ಬಿಜೆಪಿ ಬೆಂಬಲಿಗರಾದ ಮೀನಾ ದಾಸ್ ಕೂಡ ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲೂ ಈ ಚಿತ್ರವನ್ನು ವೈರಲ್ ಮಾಡಲಾಗಿದೆ.

- Advertisement -

ಒಂದು ಲಕ್ಷ ಹಿಂಬಾಲಕರು ಇರುವ ‘ಸುದರ್ಶನ್ ನ್ಯೂಸ್’ ಮತ್ತು ಮೂರು ಲಕ್ಷ ಫಾಲೋವರ್ಸ್ ಇರುವ ‘ಪಿಎಂಒ ಇಂಡಿಯಾ ನವದೆಹಲಿ’ ಮುಂತಾದ ಅನೇಕ ಫೇಸ್ಬುಕ್ ಗುಂಪುಗಳು ಕೂಡ ಈ ಚಿತ್ರದ ಬಗ್ಗೆ ಯಾವುದೇ ಪೂರ್ವಪರ ಆಲೋಚಿಸದೆ ಹಂಚಿಕೊಂಡಿವೆ. ಆದರೆ ಈ ಚಿತ್ರ ತಿರುಚಿದ್ದು ಎಂಬುದನ್ನು ಆಲ್ಟ್ ನ್ಯೂಸ್ ಪತ್ತೆ ಹಚ್ಚಿ ಸತ್ಯವನ್ನು ಬೆಳಕಿಗೆ ತಂದಿದೆ.

 2020, ಅಕ್ಟೋರ್ ತಿಂಗಳಲ್ಲಿ ಸೋನಿಯಾ ಗಾಂಧಿಯವರು ರೈತರ ಪ್ರತಿಭಟನೆ ಮತ್ತು ತೈಲ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಿಡಿಯೋ ಹೇಳಿಕೆ ನೀಡಿದ್ದರು. ಈ ವಿಡಿಯೋವನ್ನು ರಾಹುಲ್ ಗಾಂಧಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಆದರೆ ಈಗ ವೈರಲ್ ಮಾಡಿದ ವೀಡಿಯೋ ಹಾಗೂ ರಾಹುಲ್ ಗಂಧಿ ಪೋಸ್ಟ್ ಮಾಡಿರುವ ಮೂಲ ವಿಡಿಯೋದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಮೂಲ ವಿಡಿಯೋದಲ್ಲಿ ಬೈಬಲ್ ಪುಸ್ತಕವಾಗಲಿ, ಯೇಸುವಿನ ಸಣ್ಣ ಮೂರ್ತಿ ಹಾಗೂ “ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಪುಸ್ತಕ ಕಂಡುಬರುತ್ತಿಲ್ಲ. ಅದನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ ಹಂಚಲಾಗಿದೆ. ಆ ಮೂಲಕ  ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿಯ ಕುರಿತಾಗಿ ಜನರಿಗೆ ತಪ್ಪು ಕಲ್ಪನೆಗಳನ್ನು ವ್ಯವಸ್ಥಿತವಾಗಿ ಹಂಚುವ ಷಡ್ಯಂತ್ರ ಇದಾಗಿದೆ ಎಂದು ಈ ಮೂಲಕ ತಿಳಿಯಬಹುದಾಗಿದೆ

Join Whatsapp