ಇಶಾನ್‌ ವೇಗದ ದ್ವಿಶತಕ| ಬಾಂಗ್ಲಾ ವಿರುದ್ಧ ಭಾರತಕ್ಕೆ ದಾಖಲೆಯ ಅಂತರದ ಗೆಲುವು

Prasthutha|

ಏಕದಿನ ಸರಣಿಯ ಔಪಚಾರಿಕ ಮೂರನೇ ಪಂದ್ಯದಲ್ಲಿ ಟೀಮ್‌ ಇಂಡಿಯಾ, ಆತಿಥೇಯ ಬಾಂಗ್ಲಾದೇಶ ತಂಡವನ್ನು 227 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಚತ್ತೋಗ್ರಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಇಶಾನ್‌ ಕಿಶನ್‌ ಗಳಿಸಿದ ದಾಖಲೆಯ ದ್ವಿಶತಕದ ನೆರವನಿಂದ ಟೀಮ್‌ ಇಂಡಿಯಾ, ಬಾಂಗ್ಲಾ ಗೆಲುವಿಗೆ 410 ರನ್‌ಗಳ ಭರಹತ್‌ ಸವಾಲನ್ನು ಮುಂದಿಟ್ಟಿತ್ತು. ಆದರೆ 34 ಓವರ್‌ಗಳಲ್ಲಿ ಸರ್ವಪತನ ಕಂಡ ಲಿಟ್ಟನ್‌ ದಾಸ್‌ ಪಡೆ ಕೇವಲ 182ರನ್‌ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ವಿರುದ್ಧ ತಂಡವೊಂದು ದಾಖಲಿಸಿದ ಅತಿ ಹೆಚ್ಚು ಅಂತರದ ಗೆಲುವು ಇದಾಗಿದೆ.

- Advertisement -

ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಬಾಂಗ್ಲಾದೇಶ ಸರಣಿಯನ್ನು ತನ್ನದಾಗಿಸಿಕೊಂಡರೆ, ಕ್ಲೀನ್‌ಸ್ವೀಪ್‌ ತಪ್ಪಿಸುವಲ್ಲಿ ಶನಿವಾರ ಟೀಮ್‌ ಇಂಡಿಯಾ ಸಫಲವಾಯಿತು. ಗಾಯಾಳು ರೋಹಿತ್‌ ಶರ್ಮಾ ಬದಲು ಸ್ಥಾನ ಪಡೆದ ಇಶಾನ್‌ ಕಿಶಾನ್‌, ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದರು. 126 ಎಸೆತಗಳಲ್ಲಿ 200 ರನ್‌ ಸಿಡಿಸಿದ ಕಿಶಾನ್‌, ಏಕದಿನ ಕ್ರಿಕೆಟ್‌ ಚರಿತ್ರೆಯಲ್ಲೇ ಅತಿವೇಗದ ದ್ವಿಶತಕದ ಸರದಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು. ಈ ಅಬ್ಬರದ ಇನ್ನಿಂಗ್ಸ್‌ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಆ ಮೂಲಕ 138 ಎಸೆತಗಳಲ್ಲಿ 200 ರನ್‌ ಸಿಡಿಸಿದ್ದ ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌ ದಾಖಲೆ ಪತನವಾಯಿತು. ಇಶಾನ್‌ ಕಿಶಾನ್‌, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ 4ನೇ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದಕ್ಕೂ ಮೊದಲು ರೋಹಿತ್‌ ಶರ್ಮಾ (3 ಬಾರಿ), ವೀರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡೂಲ್ಕರ್ ಈ ಸಾಧನೆ ಮಾಡಿದ್ದಾರೆ. ಇವರಲ್ಲದೆ ಪಾಕಿಸ್ತಾನದ ಫಖರ್ ಝಮಾನ್‌ ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಸಹ ಏಕದಿನ ಕ್ರಿಕೆಟ್‌ನಲ್ಲಿ 200ರ ಗಡಿ ದಾಟಿದ್ದಾರೆ.

103 ಎಸೆತಗಳಲ್ಲಿ 150 ರನ್‌ ದಾಖಲಿಸುವ ಮೂಲಕ, ಅತಿವೇಗದ 150 ರನ್‌ ದಾಖಲಿಸಿದ ಭಾರತೀ ಆಟಗಾರ ಎಂಬ ದಾಖಲೆ ನಿರ್ಮಿಸಿದ ಇಶಾನ್‌ ಈ ಹಾದಿಯಲ್ಲಿ ಸೆಹ್ವಾಗ್‌ರನ್ನು (112 ಎಸೆತ) ಹಿಂದಿಕ್ಕಿದರು. ಜನವರಿ 2020ರ ಬಳಿಕ ಟೀಮ್‌ ಇಂಡಿಯಾದ ಆರಂಭಿಕ ಆಟಗಾರರು ಗಳಿಸಿದ ಮೊದಲ ಶತಕವೂ ಇದಾಗಿದೆ.

- Advertisement -

ಇದೇ ವೇಳೆ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಮೂರು ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕದ ಸಂಭ್ರಮವನ್ನಾಚರಿಸಿದರು. 91 ಎಸೆತಗಳನ್ನು ಎದುರಿಸಿದ ಕೊಹ್ಲಿ, 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ವೃತ್ತಿ ಜೀವನದ 44ನೇ ಏಕದಿನ ಶತಕ ಪೂರ್ತಿಗೊಳಿಸಿದರು.

ಮತ್ತೊಂದೆಡೆ, ಕಳೆದ ಎರಡು ಪಂದ್ಯಗಳಲ್ಲಿ ಬಾಂಗ್ಲಾ ಪಾಲಿಗೆ ಆಪತ್ಬಾಂಧವನಾಗಿದ್ದ ಮೆಹ್ದಿ ಹಸನ್‌ ಮಿರಾಝ್‌, ಇಂದಿನ ಪಂದ್ಯದಲ್ಲಿ ಕೇವಲ 3 ರನ್‌ಗಳಿಸಲಷ್ಟೇ ಶಕ್ತರಾದರು. ಅದಾಗಿಯೂ ಸರಣಿ ಶ್ರೇಷ್ಠ ಪ್ರಶಸ್ತಿ ಹಸನ್‌ ಪಾಲಾಯಿತು. ಟೀಮ್‌ ಇಂಡಿಯಾ ಪರ ಬೌಲಿಂಗ್‌ನಲ್ಲಿ ಶಾರ್ದೂಲ್‌ ಠಾಕೂರ್‌ 3 ಮತ್ತು ಅಕ್ಷರ್‌ ಪಟೇಲ್‌-ಉಮ್ರಾನ್‌ ಮಲಿಕ್‌ ತಲಾ 2 ವಿಕೆಟ್‌ ಪಡೆದರು.



Join Whatsapp