ಪೋರ್ಚುಗಲ್‌ಗೆ ಆಘಾತ ನೀಡಿದ ಮೊರೊಕ್ಕೊ| ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!

Prasthutha|

►ಸೆಮಿಫೈನಲ್ ಪ್ರವೇಶಿಸಿದ ಮೊರೊಕ್ಕೊ!

- Advertisement -

ಹೊಸದಿಲ್ಲಿ: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಶನಿವಾರ ನಡೆದ ಮಹತ್ವದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಮೊರೊಕ್ಕೊ ತಂಡವು 1-0 ಗೋಲಿನಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಕತಾರ್ ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಮೊರೊಕ್ಕೊ ಪರ ಯೂಸುಫ್ ಅನ್ನಸ್ರಿ(42ನೇ ನಿಮಿಷ) ಏಕೈಕ ಗೋಲು ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಈ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

- Advertisement -

ಪೋರ್ಚುಗಲ್‍ಗೆ ಕಾಡಿದ ರೊನಾಲ್ಡೊ ಅನುಪಸ್ಥಿತಿ?

ಈ ಮಹತ್ವದ ಪಂದ್ಯದಲ್ಲಿ ಪೋರ್ಚುಗಲ್‍ಗೆ ಕ್ರಿಸ್ಟಿಯಾನೊ ರೊನಾಲ್ಡೊ ಅನುಪಸ್ಥಿತಿ ಹೆಚ್ಚು ಕಾಡಿತು. ರೊನಾಲ್ಡೊ ಬದಲು ಗೊನ್ಕಾಲೊ ರಾಮೋಸ್ ಆಡಿದರು. ಆಂತರಿಕ ಕಾರಣಗಳಿಂದ ರೊನಾಲ್ಡೊ ಬೆಂಚ್ ಕಾಯಬೇಕಾಯಿತು. 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮೊರೊಕ್ಕೊ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದರು. 

ಪೋರ್ಚುಗಲ್ ಗೋಲು ಗಳಿಸಲು ನಡೆಸಿದ ಪ್ರಯತ್ನಗಳನ್ನು ಮೊರೊಕ್ಕೊ ಆಟಗಾರರು ವಿಫಲಗೊಳಿಸಿದರು. ಹೀಗಾಗಿ ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ಪೋರ್ಚುಗಲ್‍ಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮ ಹಂತದ ಹೋರಾಟದಲ್ಲಿ ಮೈದಾನ ಪ್ರವೇಶಿಸಿದ್ದ ರೊನಾಲ್ಡೊ ಮ್ಯಾಜಿಕ್ ಮಾಡ್ತಾರೆ ಅಂತಾ ಕಾಯುತ್ತಿದ್ದ ಅಭಿಮಾನಿಗಳ ಕನಸು ನನಸಾಗಲಿಲ್ಲ. ಪಂದ್ಯದಲ್ಲಿ ಸೋಲುವ ಮೂಲಕ ಪೋರ್ಚುಗಲ್‍ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಮೂಲಕ ಫುಟ್ಬಾಲ್ ಪ್ರೇಮಿಗಳಿಗೆ ದೊಡ್ಡ ನಿರಾಸೆ ಮೂಡಿಸಿದರು.

ವಿಶ್ವಕಪ್ ಕನಸು ಭಗ್ನ, ಕಣ್ಣೀರು ಹಾಕಿದ ರೊನಾಲ್ಡೊ

ಪಂದ್ಯದ 50 ನಿಮಿಷಗಳ ಬಳಿಕ ಮೈದಾನಕ್ಕೆ ಬಂದ ರೊನಾಲ್ಡೊ ಗೋಲು ಗಳಿಸಿ ಸ್ಕೋರ್ ಅನ್ನು ಸಮಬಲಗೊಳಿಸಲು ಪ್ರಯತ್ನಿಸಿ ವಿಫಲರಾದರು. 37 ವರ್ಷದ ವಿಶ್ವವಿಖ್ಯಾತ ಆಟಗಾರನಿಗೆ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಆಗಿದ್ದರಿಂದ ಸೋಲು ಬಹುದೊಡ್ಡ ನಿರಾಸೆ ಮೂಡಿಸಿತು. ತಂಡ ಸೋತ ಬೆನ್ನಲ್ಲಿಯೇ ರೊನಾಲ್ಡೊ ಮೈದಾನದಲ್ಲಿಯೇ ಕಣ್ಣೀರು ಹಾಕಿದರು.

Join Whatsapp