ಸಿಎಂ-ಸರ್ಕಾರ ಇದೆಯೇ? ಕುಮಾರಸ್ವಾಮಿ ಮಾರ್ಮಿಕ ಪ್ರಶ್ನೆ: ಅಶ್ವಥ್‌ನಾರಾಯಣ್‌ಗೆ ಏಕವಚನದಲ್ಲಿ ತರಾಟೆ

Prasthutha|

ಅರಕಲಗೂಡು: ರಾಜ್ಯದ 13 ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಮಳೆ ಹಾನಿಯಾಗಿದೆ. ಈ ವೇಳೆ ಸಚಿವರು ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಬೇಕಿತ್ತು. ಜನರ ಸಮಸ್ಯೆಗೆ ಸ್ಪಂದಿಸಬೇಕಿತ್ತು, ಆದರೆ ಯಾವುದೂ ಆಗಿಲ್ಲ. ಎಲ್ಲರಿಗೂ ಅವರವರ ಸ್ಥಾನ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ. ಸಚಿವರು ಹಣದ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

- Advertisement -


ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಹಿಂದುತ್ವದ ಸಂಪ್ರದಾಯದಂತೆ ಯಾರನ್ನು ಸಿಎಂ ಮಾಡಿದ್ರೆ ಬಿಜೆಪಿ ಉಳಿಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಸಿಎಂ ಇದ್ದಾರೆ ಎನ್ನುವ ಭಾವನೆಯೇ ಜನರಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಇದಕ್ಕೆಲ್ಲ ಬಿಜೆಪಿ ನಡವಳಿಕೆ ಹಾಗೂ ಕಾಣದ ಶಕ್ತಿಗಳ ಹೇರಿಕೆ ಕಾರಣ ಎಂದು ದೂರಿದರು. ಈ ಸರ್ಕಾರ ರಿಮೋಟ್ ಕಂಟ್ರೋಲ್‌ನಲ್ಲಿ ನಡೆಯುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಮಳೆ ನೋಡಿದ್ದೇವೆ.
ಈ ಸಂದರ್ಭದಲ್ಲಿ ಸರ್ಕಾರ ಇದೆ ಎನ್ನುವ ಭಾವನೆಯೇ ಜನರಲ್ಲಿ ಇಲ್ಲ. ಕಂದಾಯ ಸಚಿವರು ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡೋದು, ಸಿಎಂ ವಿಸಿ ಮಾಡೋದು ಬಿಟ್ಟರೆ ಸ್ಥಳಕ್ಕೆ ಯಾವುದೇ ಸಚಿವರು ಭೇಟಿ ನೀಡಿಲ್ಲ ಎಂದು ಆರೋಪಿಸಿದರು. ಕೂಡಲೇ ವಿದಾನಸಭೆ ಕಲಾಪ ಕರೆಯಿರಿ ಎಂದು ಹೇಳಿದ್ದೇನೆ, ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.

- Advertisement -ಕುಮಾರಸ್ವಾಮಿ ಅಧಿವೇಶನ ಕರೀರಿ ಅಂತಾರೆ, ಆದರೆ ಅಧಿವೇಶನಕ್ಕೆ ಬರಲ್ಲ, ಕುಮಾರಸ್ವಾಮಿ ಎಲ್ಲಿದ್ದೀಯಪ್ಪಾ ಅಂತ ಹುಡುಕಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲರಾದರು.


ದುರಹಂಕಾರಿ ಅಶ್ವಥ್ ನಾರಾಯಣ್‌ಗೆ, ಬಿಜೆಪಿ ಪಕ್ಷಕ್ಕೆ ಟಮ ಟಮ ಅಂದ್ರೆ ಏನು ಅಂತ ಈ ನಾಡಿನ ಜನ ತೋರಿಸುತ್ತಾರೆ. ನಾನು ವಿಧಾನಸಭೆಯಲ್ಲಿ ಯಾವ ರೀತಿ ಮಾತನಾಡಬೇಕು ಎಂದು ಇವರಿಂದ ಕಲಿಯಬೇಕಿಲ್ಲ. ನಾನು ಬಂದಾಗ ಯಾವ ರೀತಿ ಸದನ ನಡೆಯುತ್ತಿತ್ತು, ನೀವು ಯಾವ ರೀತಿ ಕಲಾಪಗಳನ್ನು ಹಾಳು ಮಾಡಿದ್ರಿ, ಇದನ್ನೆಲ್ಲ ಗಮನಿಸಿದ್ದೇನೆ ಎಂದು ತಿರುಗೇಟು ನೀಡಿದರು.


ಸದನಕ್ಕೆ ನಾವು ಬರೋದು ಟಿಎ-ಡಿಎ ಬಿಲ್ ತಗೊಳಲು ಅಲ್ಲ, ನಾನು ಎರಡು ಮೂರು ವಿಷಯ ಪ್ರಸ್ತಾಪ ಮಾಡಿದಾಗ ನಿಮ್ಮ ಅಧ್ಯಕ್ಷರು ಏನು ಪ್ರತಿಕ್ರಿಯೆ ಕೊಟ್ಟಿದ್ದಾರೆ ಅನ್ನೋದು ಕಡತದಲ್ಲಿದೆ, ಅದನ್ನು ತೆಗೆದು ನೋಡಪ್ಪ ಟಾಂಗ್ ನೀಡಿದರು.


ನಿನ್ನಿಂದ ನಾನು ಕಲಿಯಬೇಕಿಲ್ಲ, ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೆಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ನಿನ್ನ ಪಟಾಲಂ ಇಟ್ಟುಕೊಂಡು, ಎಲ್ಲಿ ತನಿಖೆ ಆಗುತ್ತೆ ಅಂಥ ಕಾರ್ಪೊರೇಷನ್ ಆಫೀಸ್ ತಂದು ಕಡತ ಸುಡುವ ಕೆಲಸ ಮಾಡಿದ್ದಿಯಾ, ನನ್ನ ಸರ್ಕಾರ ತೆಗೆಯಲು ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಮಾಡೋರನ್ನು ಇಟ್ಟುಕೊಂಡು ಏನೇನ್ ನಡೆಸಿದ್ದೀಯಾ ಅನ್ನೋದು ನನಗೆ ಗೊತ್ತಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು. ನಿನ್ನಿಂದ ನಾನು ಕಲಿಯಬೇಕಾ, ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ವಾರ್ನಿಂಗ್ ಮಾಡಿದರು.
ಲೂಟಿ ಹೊಡ್ಕಂಡು ಇವತ್ತು ರಾಜ್ಯ ಹಾಳು ಮಾಡುತ್ತಿದ್ದೀರಿ, ನನ್ನ ನಡವಳಿಕೆ, ವಿಧಾನಸಭೆಯಲ್ಲಿ ನನ್ನ ಪರ್‌ಫಾರ್ಮೆನ್ಸ್ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ ನಿನಗೆ ಎಲ್ಲಿದೆ. ನನ್ನ ಬಗ್ಗೆ ಚರ್ಚೆ ಮಾಡಬೇಕಾದರೆ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಏನು ಅಂತ ತೋರಿಸುತ್ತೇವೆ ಎಂದ ಕುಮಾರಸ್ವಾಮಿ, ಬಿಜೆಪಿ ಎಲ್ಲಿ ಇರುತ್ತೆ ಅನ್ನೋದನ್ನ ಕಾದು ನೋಡಿ. ದುಡ್ಡಿನ ಮದದಲ್ಲಿ ಮಾತನಾಡುವ ಅಶ್ವಥ್ ನಾರಾಯಣ್, ಮುಂದೆ ಪ್ರಾಯಶ್ಚಿತ್ತ ಅನುಭವಿಸೋ ಕಾಲ ಬರಲಿದೆ ಎಂದರು.

ಕೆಎಂಶಿಗೆ ನನ್ನ ನಂಬರ್ ಮರೆತು ಹೋಗಿರಬಹುದು. ಕೆಲ ಶಾಸಕರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಇದ್ಯಾವುದರ ಬಗ್ಗೆ ಚಿಂತೆ ಇಲ್ಲ, ಆತಂಕವೂ ಇಲ್ಲ. ಎಲ್ಲಿಯವರೆಗೆ ಪಕ್ಷದ ಕಾರ್ಯಕರ್ತರು ಪಕ್ಷ ಬೆಳೆಸುತ್ತಾರೋ, ಅಲ್ಲೀವರೆಗೂ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುತ್ತಾರೆ ಎಂದರು.


ಪಕ್ಷ ತೊರೆಯುವವರ ಬಗ್ಗೆ ನಾನು ಚರ್ಚೆ ಮಾಡಲ್ಲ. ಪಕ್ಷದ ಬಗ್ಗೆ ಗೌರವ ಇರುವವರು, ಪಕ್ಷದ ಋಣ ಇರುವವರು, ಸರಿಯಾಗಿ ನಡೆದುಕೊಳ್ಳೋದು ಅವರಿಗೆ ಬಿಟ್ಟಿದ್ದು ಎಂದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಮನವೊಲಿಸುತ್ತೀರಾ ಎಂಬ ಪ್ರಶ್ನೆಗೆ, ಅವರಲ್ಲಿ ಕ್ರಿಯೆ ಇಲ್ಲದಿದ್ದರೆ ನಾನೇನು ಮಾಡೋಕೆ ಆಗುತ್ತೆ ಎಂದರು. ಬಹುಶಃ ನನ್ನ ನಂಬರ್ ಅವರಿಗೆ ಮರೆತು ಹೋಗಿರಬಹುದು ಎಂದು ಅಸಮಾಧಾನ ಹೊರ ಹಾಕಿದರು. ಜಿ.ಟಿ.ದೇವೇಗೌಡರ ಜೊತೆ ನಾನು ಮಾತನಾಡಿದ್ದೇನೆ, ಅವರು ಮಾತನಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಎಂದಿದ್ದಾರೆ, ಕಾದು ನೋಡೋಣ ಎಂದರು.

Join Whatsapp