ಮೋದಿ ಪರ ಹಾಡು ಬರೆದಿದ್ದ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ ಎಂಬುದು ಕಟ್ಟುಕಥೆ?

Prasthutha|

ಮೈಸೂರು: ಪ್ರಧಾನಿ ಮೋದಿ ಪರ ಹಾಡು ಬರೆದಿದ್ದಕ್ಕೆ ಮೈಸೂರಿನ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ತಿರುವು ಸಿಕ್ಕಿದೆ. ವಾಸ್ತವದಲ್ಲಿ ಹಲ್ಲೆ ಘಟನೆ ನಡೆದಿಲ್ಲ, ಅದೊಂದು ಸೃಷ್ಟಿಸಲ್ಪಟ್ಟ ಕಟ್ಟುಕಥೆ ಎಂಬುದು ಪೊಲೀಸರ ತನಿಖೆ ಬಯಲಾಗಿದೆ ಎಂದು ಈದಿನ ನ್ಯೂಸ್ ವರದಿ ಮಾಡಿದೆ.

- Advertisement -

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮೈಸೂರು ನಗರ ಪೊಲೀಸರು ತನಿಖೆ ನಡೆಸಿದಾಗ ಎಲ್ಲವೂ ಕಟ್ಟುಕಥೆ ಎಂಬುದು ಬಯಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಮೈಸೂರಿನ ಪೊಲೀಸರು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಯೂಟ್ಯೂಬರ್ ರೋಹಿತ್ ಅಲಿಯಾಸ್ ಲಕ್ಷ್ಮೀ ನಾರಾಯಣ ಎಂಬಾತ, ನಾನು ಕಳೆದ ವಾರ ಮೋದಿ ಕುರಿತಾಗಿ ಆರ್‌ ಆರ್‌ ಫಿಲಂ ಕಂಪೆನಿ ಎಂಬ ಯೂಟ್ಯೂಬ್‌ ಚಾನೆಲ್‌ಗೆ ಹಾಡು ಮಾಡಿದ್ದೆ. ನಾನು ಜನರ ಜೊತೆ ಈ ಹಾಡು ತೋರಿಸಿ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ಏಪ್ರಿಲ್ 19ರ ಮಧ್ಯಾಹ್ನ 12 ಗಂಟೆಗೆ ನಾನು ಮೈಸೂರಿನ ಸರ್ಕಾರಿ ಗೆಸ್ಟ್‌ ಹೌಸ್‌ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ನನ್ನ ಹಾಡು ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ, ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ. ಈ ವೇಳೆ ಅವರು ಮೋದಿ ಬಗ್ಗೆ ಹಾಡು ಮಾಡ್ತೀಯಾ ಎಂದು ಪ್ರಶ್ನಿಸಿ, ಪಾಕಿಸ್ತಾನದ ಪರ, ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಒತ್ತಾಯ ಮಾಡಿ ಬಾಟಲ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ದೂರಿನಲ್ಲಿ ಸಲೀಂ, ಜಾವೇದ್, ಪಾಷಾ ಹಾಗೂ ಇನ್ನಿಬ್ಬರು ಅಪರಿಚರು ಸೇರಿದಂತೆ ಒಟ್ಟು ಐದು ಮಂದಿ ಇದ್ದರು ಎಂದು ಉಲ್ಲೇಖಿಸಿ ಹೆಸರು ನೀಡಿದ್ದ. ಈ ದೂರಿನನ್ವಯ ನಜರಾಬಾದ್ ಪೊಲೀಸ್ ಸ್ಟೇಷನ್‌ನಲ್ಲಿ ಎಫ್​ಐಆರ್ ದಾಖಲಾಗಿತ್ತು.

- Advertisement -

ಪ್ರಕರಣದ ಸಂಬಂಧ ಪೊಲೀಸರು ತನಿಖೆಗಿಳಿದಾಗ ಇದೊಂದು ಕಟ್ಟುಕಥೆ ಎಂದು ತಿಳಿದುಬಂದಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಲೋಕಸಭಾ ಚುನಾವಣೆಯ ವೇಳೆ ಪ್ರಚಾರಗಿಟ್ಟಿಸಿಕೊಳ್ಳಲು ರಾಜಕೀಯ ದುರುದ್ದೇಶದಿಂದ ಆತ ನಾಟಕ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಆತನೇ ಬಿಯರ್ ತಂದು ಅದನ್ನು ಮೈಮೇಲೆ ಸುರಿದುಕೊಂಡು, ಬಟ್ಟೆಗಳನ್ನು ಹರಿದು, ಮೈಕೈಗೆ ಗಾಯಮಾಡಿಕೊಂಡು ಕಟ್ಟುಕಥೆ ಸೃಷ್ಟಿಸಿ, ಕಾಲ್ಪನಿಕ ಮುಸ್ಲಿಂ ಹೆಸರುಗಳನ್ನು ದೂರಿನಲ್ಲಿ ನೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂಬಂಧ ಮೈಸೂರು ನಗರ ಪೊಲೀಸರು ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು ಎಂದು ಈದಿನ ವೆಬ್ ಪೋರ್ಟಲ್ ವರದಿ ಮಾಡಿದೆ.

ಬಿಜೆಪಿ ಪ್ರಕರಣವನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಏಪ್ರಿಲ್ 19ರ ಸಂಜೆ 6.39ಕ್ಕೆ ವೀಡಿಯೋವನ್ನು ಬಿಜೆಪಿ ತನ್ನ ಅಧಿಕೃತ x ಖಾತೆಯಲ್ಲಿ ಹಂಚಿಕೊಂಡಿತ್ತು. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಕ್ರೈಂ ಸ್ಟೇಟ್ ಬದಲಾಯಿಸಿದೆ ಎಂದು ಆರೋಪಿಸಲಾಗಿತ್ತು. ಮೋದಿ ಪರ ಹಾಡು ಬರೆದು ತೋರಿಸಿದ್ದೇ ತಪ್ಪಾಯಿತು, ಮತಾಂಧ ಜಿಹಾದಿ ಗೂಂಡಾಗಳು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಸಿದ್ದರಾಮಯ್ಯ ಸಾಬ್‌, ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ?’ ಎಂದು ಬಿಜೆಪಿ ಪ್ರಶ್ನಿಸಿತ್ತು. ವಿಧಾನಸೌಧದಲ್ಲೇ ಪಾಕಿಸ್ತಾನ್‌ ಘೋಷಣೆ ಕೂಗಿಸಿದ್ದು ಆಯ್ತು, ಇದೀಗ ಪ್ರತಿಯೊಬ್ಬ ಕನ್ನಡಿಗನೂ ಘೋಷಣೆ ಕೂಗಬೇಕೇ? ಕನ್ನಡ ಬಿಟ್ಟು ಎಲ್ಲರೂ ಉರ್ದು ಕಲಿತು, ಟಿಪ್ಪು ಭಾಷೆಯಲ್ಲೇ ಮಾತನಾಡಬೇಕೇ? ಸರ್ಕಾರದಿಂದಲೇ ಅಧಿಕೃತ ಆದೇಶ ಹೊರಡಿಸಿಬಿಡಿ, ಸುಮ್ಮನೆ ನಿಮ್ಮ ಮೌಖಿಕ ಆದೇಶಗಳಿಂದ ಜನತೆ ಗೊಂದಲಗೊಂಡು ಭಯಭೀತರಾಗಿದ್ದಾರೆ ಎಂದು ಪೋಸ್ಟ್‌ ಹಾಕಿತ್ತು. ಜೊತೆಗೆ #TalibaniCongress, #CongressFailsKarnataka ಎಂಬ ಹ್ಯಾಷ್‌ಟ್ಯಾಗ್ ಕೂಡ ಬಳಸಿತ್ತು. ಆ ಬಳಿಕ ರೋಹಿತ್ ಮಾಡಿದ್ದ ಮೋದಿ ಹಾಡನ್ನು ಹಲವು ಮಂದಿ ಬಿಜೆಪಿ ಬೆಂಬಲಿಗರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.

Join Whatsapp