ಕೋವಿಡ್ ಮಾರ್ಗಸೂಚಿ ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ?: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ‘ಕೇಂದ್ರ ಸಚಿವರು ಕಾನೂನಿಗಿಂತ ದೊಡ್ಡವರೆ ? ಕೋವಿಡ್ ಮಾರ್ಗಸೂಚಿ ಇವರಿಗೆ ಅನ್ವಯವಾಗುವುದಿಲ್ಲವೇ? ಬಿಜೆಪಿಯವರಿಗೊಂದು ಕಾನೂನು, ಜನಸಾಮಾನ್ಯರು ಮತ್ತು ವಿರೋಧ ಪಕ್ಷದವರಿಗೊಂದು ಕಾನೂನು ಇದೆಯೇ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

- Advertisement -


ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ, ಸಲೀಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ, ವಕ್ತಾರರಾದ ಬಸವರಾಜು, ಮನೋಹರ್ ಮತ್ತಿತರರು ಹಾಜರಿದ್ದರು.


ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ‘ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ನೂತನ ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಲಿ ಆದರೆ, ಕೋವಿಡ್ ಪಿಡುಗು ನಿಯಂತ್ರಣಕ್ಕೆ ವಿಧಿಸಿರುವ ಮಾರ್ಗಸೂಚಿ ಅನ್ವಯವಾಗುವುದಿಲ್ಲವೇ? ಕೇಂದ್ರ ಸಚಿವರಾದ ಖೂಬಾ ಅವರಿಂದ ಹಿಡಿದು, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಅವರು 700, 800 ಕಿ.ಮೀ ದೂರ ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಇವರು ಹೋದಲ್ಲೆಲ್ಲಾ ಸಾವಿರಾರು ಜನರನ್ನು ಸೇರಿಸಿಕೊಂಡು ಸಭೆ ಸಮಾರಂಭ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಪೊಲೀಸರು ಯಾವ ಪ್ರಕರಣವನ್ನು ದಾಖಲಿಸಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು.

- Advertisement -


‘ಇತ್ತೀಚೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮ ಆಚರಿಸಲು ಸರ್ಕಾರ ಅನುಮತಿ ನಿರಾಕರಿಸಿತ್ತು. ಇನ್ನು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ 300 ಬೆಂಬಲಿಗರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಬಿಜೆಪಿ ನಾಯಕರು ಕಾನೂನಿಗಿಂತ ದೊಡ್ಡವರು ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳು ಕೂಡ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೋವಿಡ್ ನಿಯಮ ಉಲ್ಲಂಘನೆ ಯಾರೇ ಮಾಡಿದರೂ ದೂರು ದಾಖಲಿಸಬೇಕು. ಆದರೆ ಸರ್ಕಾರ ಮಾತ್ರ ಬಿಜೆಪಿ ನಾಯಕರು ಕಾನೂನು ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಖೂಬಾ ಅವರು ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆಗೆ ಆಗಸಮಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೊರಲಾಯಿತು. ಆದರೆ ಈ ಪ್ರಕರಣದಲ್ಲೂ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಗೃಹಮಂತ್ರಿಗಳು ಇದು ಸಂಪ್ರದಾಯ ಎಂದು ಸಮರ್ಥಿಸಿಕೊಂಡಿದ್ದಾರೆ. ಎಲ್ಲವೂ ಸಂಪ್ರದಾಯವೇ ಆದರೆ, ಈ ಮಾರ್ಗಸೂಚಿ, ಕಾನೂನು ಎಲ್ಲ ಯಾಕೆ ಬೇಕು? ಎಲ್ಲವನ್ನು ತೆಗೆದುಹಾಕಿ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ತಾವೇ ಗುಂಡು ಹಾರಿಸಿದ ಫೋಟೋ ಮಾಧ್ಯಮಗಳಲ್ಲಿ ಬಂದಿದ್ದು, ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ?’ ಎಂದು ಕಿಡಿಕಾರಿದರು.


ಬಿಜೆಪಿ ಸರ್ಕಾರದ ಈ ನಡೆ ನೋಡಿದರೆ, ರಾಜ್ಯದಲ್ಲಿ ಕಾನೂನು ಇದೆಯೋ, ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿದೆ. ವಿನಯ್ ಕುಲಕರ್ಣಿ ಅವರ ಮೇಲೆ ಪ್ರಕರಣ ದಾಖಲಿಸಿರುವುದು ತಪ್ಪು ಎಂದು ಹೇಳುತ್ತಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ ಯಾರೇ ಆಗಲಿ, ನಾವಾದರೂ ನಮ್ಮ ಮೇಲೆ ಕೇಸ್ ಹಾಕಲಿ. ಆದರೆ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ? ವಿನಯ್ ಕುಲಕರ್ಣಿ ಅವರನ್ನು ಸ್ವಾಗತ ಮಾಡಿರುವುದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಅವರ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಎರಡು ಕೈಗಳಲ್ಲಿ ವಿಕ್ಟರಿ ಸನ್ನೆ ಮಾಡುತ್ತಾ ಹೊರಬರಲಿಲ್ಲವೇ?’ ಎಂದರು.

‘ಈ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ಅನುಮತಿ ನಿರಾಕರಿಸಿ ಮುಖ್ಯ ಕಾರ್ಯದರ್ಶಿ ಪತ್ರ ಬರೆಯುತ್ತಾರೆ. ಆದರೆ ಸಾವಿರಾರು ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಲು ಅನುಮತಿ ನೀಡುತ್ತಾರೆ. ಕೋವಿಡ್ ಮೂರನೇ ಅಲೆ ಬಂದರೆ, ಅದರಿಂದ ಅನಾಹುತ ಆದರೆ ಅದಕ್ಕೆಲ್ಲ ಈ ನಾಲ್ಕು ಜನ ಕೇಂದ್ರ ಸಚಿವರೇ ಹೊಣೆಯಾಗುತ್ತಾರೆ’ ಎಂದು ಟೀಕಿಸಿದರು.


‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಗೃಹ ಸಚಿವರ ಹೆಗಲ ಮೇಲಿದೆ. ಬಿಜೆಪಿ ಮಾಜಿ ಸಚಿವರು ನಾಡ ಬಂದೂಕಿನಿಂದ ಗುಂಡು ಹಾರಿಸಲು ಅವಕಾಶ ಕೊಟ್ಟಿದ್ದು ಯಾರು? ಅದು ಎಲ್ಲಿಂದ ಬಂತು? ಇದನ್ನು ಗೃಹ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಸಮರ್ಥನೆಗೆ ಮುಂದಾಗಿ, ಬಿಹಾರ ಹಾಗೂ ಉತ್ತರ ಪ್ರದೇಶದ ಸಂಸ್ಕೃತಿಯನ್ನು ತರಲು ಮುಂದಾಗಬಾರದು. ನಮ್ಮದು ಶಾಂತಿ ಪ್ರಿಯ ರಾಜ್ಯ. ಇದನ್ನು ನೋಡಿ ಬೇರೆಯವರು ಕಲಿಯ ಬಾರದು. ಮೊದಲ ಬಾರಿಗೆ ಸಚಿವರಾಗಿರುವ ಗೃಹಮಂತ್ರಿಗಳು ಕಾನೂನು ಪುಸ್ತಕ ಓದಬೇಕು’ ಎಂದು ಟೀಕಿಸಿದರು.



Join Whatsapp