ಕಡುಕಷ್ಟದ ದಿನಗಳಲ್ಲಿ ಸೆಂಟ್ರಲ್ ವಿಸ್ಟಾ ಅಗತ್ಯವೇ?

Prasthutha|

-ಕುಮಾರ್ ಕಾಳೇನಹಳ್ಳಿ

- Advertisement -

ಭಾರತದ ಆರ್ಥಿಕ ಸ್ಥಿತಿ ದುರ್ಬಲವಾಗಿ ಮುಂದುವರಿಯಲಿದೆ. 2021ರಲ್ಲಿ ಪ್ರಮುಖ ಆರ್ಥಿಕ ಹೊರೆಗಳ ಸವಾಲು ತಂದೊಡ್ಡಬಹುದು ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಅಭಿಪ್ರಾಯ ಪಟ್ಟಿತ್ತು. ಕೇಂದ್ರ ಸರ್ಕಾರ ಆದಾಯ ಹೆಚ್ಚಳ ಕ್ರಮಗಳನ್ನು ಜಾರಿಗೊಳಿಸಿರುವುದರ ದಾಖಲೆಗಳನ್ನು ಗಮನಿಸಿದರೆ ಹಣಕಾಸು ಸ್ಥಿತಿ ಬಲವರ್ಧನೆ ದುರ್ಬಲವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದರು.

ಭಾರತದ ಅತ್ಯಧಿಕ ಸಾಲದ ಹೊರೆ ಗಮನಿಸಿದರೆ ಸಾಮಾನ್ಯ ಜಿಡಿಪಿ ಸ್ಥಿರ ಬೆಳವಣಿಗೆ ಸಾಧಿಸುವ ತನಕ ಸರಕಾರದ ಆರ್ಥಿಕ ಪರಿಸ್ಥಿತಿ ಬಲವರ್ಧನೆಗೆ ಅಡ್ಡಿ ಎಂದು ಸಹ ತಜ್ಞರು ಹೇಳಿದ್ದರು.

- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ 2014ರಿಂದಲೂ ಸ್ಪಷ್ಟ ಗುರಿ, ಆರ್ಥಿಕ ನಿಖರತೆ ಬೆಳವಣಿಗೆ ಸಾಧಿಸುವ ಛಲ ಇಲ್ಲದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ ಕಾಣುತ್ತಲೇ ಇದೆ. ಅದರಲ್ಲಿಯೂ ದೇಶದ ಆರ್ಥಿಕ ಅಂತರ್ಯವನ್ನು ಅರ್ಥ ಮಾಡಿಕೊಳ್ಳಲಾರದೇ ದಿಢೀರನೆ ಜಾರಿಗೆ ತಂದ ನೋಟು ಅಮಾನ್ಯೀಕರಣ ನೀತಿಯಂತೂ ನಾನಾ ವಲಯಗಳ ಚಟುವಟಿಕೆಗೆ ಬಲವಾದ ಪೆಟ್ಟು ನೀಡಿದೆ. ಇದರಿಂದ ಕಪ್ಪುಹಣ ಉಳ್ಳವರ ಕೂದಲು ಕೊಂಕದಿದ್ದರೂ ದುಡಿದುಣ್ಣುವ ವರ್ಗ ಬದುಕು ಜರ್ಜರಿತವಾಯಿತು. ರಾಷ್ಟ್ರದ ಆರ್ಥಿಕ ಸ್ಥಿತಿಯೇ ಅಭದ್ರವಾಯಿತು. ಆದರೂ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ತಪ್ಪು ಆರ್ಥಿಕ ನೀತಿಗಳನ್ನು ಮುಂದುವರಿಸಿತು.

ದೇಶಕ್ಕೆ ಏಕರೂಪದ ವಾಣಿಜ್ಯ ತೆರಿಗೆ ನೀತಿ ಜಾರಿಗೆ ತರಬೇಕೆನ್ನುವ ಚಿಂತನೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತಲೂ ಮುಂಚಿನಿಂದಲೂ ಇತ್ತು. ಇದರ ಸಾಧಕ ಬಾಧಕಗಳ ಪರಿಶೀಲನೆ ನಿರಂತರವಾಗಿ ನಡೆದಿತ್ತು. ಇದಕ್ಕೊಂದು ವೈಜ್ಞಾನಿಕ ಸ್ವರೂಪ ಕೊಡಬೇಕೆನ್ನುವ ಚಿಂತನೆಯಿತ್ತು. ಇದ್ಯಾವುದಕ್ಕೂ ಗಮನವನ್ನೇ ನೀಡದೇ ಮೋದಿ ಸರ್ಕಾರ ಜಾರಿಗೆ ತಂದ ಜಿ.ಎಸ್.ಟಿಯಂತು ನಾನಾ ಕ್ಷೇತ್ರಗಳ ಉತ್ಪಾದನಾ ಘಟಕಗಳಿಗೆ ಸಹಿಸಿಕೊಳ್ಳಲಾಗದ ಪೆಟ್ಟು ನೀಡಿತು. ಇದರಿಂದ ಸಾಕಷ್ಟು ಉತ್ಪಾದನಾ ಘಟಕಗಳ ಸ್ಥಗಿತ ಉಂಟಾಯಿತು. ಅದಿನ್ನೂ ನಿಂತಿಲ್ಲ.

 ಮೋದಿ ಸರ್ಕಾರದ ತಪ್ಪುತಪ್ಪು ಆರ್ಥಿಕ ಹೆಜ್ಜೆಗಳ ಫಲವಾಗಿ ಸಾಕಷ್ಟು ಉತ್ಪಾದನಾ ಘಟಕ ಮುಚ್ಚಿದ ಪರಿಣಾಮ ಕೆಲಸವಿದ್ದ ಲಕ್ಷಾಂತರ ಮಂದಿ ನಿರುದ್ಯೋಗಿಗಳಾದರು. ಇದಲ್ಲದೇ ಕೋಟ್ಯಂತರ ಪದವೀಧರ ನಿರುದ್ಯೋಗಿಗಳು ಉದ್ಯೋಗದ ಭರವಸೆಯಿಲ್ಲದೇ ಕಂಗಾಲಾದರು. ಹೊಸ ಉದ್ಯೋಗಗಳನ್ನು ಸಷ್ಟಿಸುವುದಿರಲಿ, ಇದ್ದ ಉದ್ಯೋಗಗಳನ್ನು ಕಳೆದುಕೊಳ್ಳುವಂತೆ ಮಾಡಿದವರು ತಾವು ಎಲ್ಲಿ ಎಡವಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳಲಿಲ್ಲ. ಬದಲಿಗೆ ಕೆಲಸ ಕೊಡಿ ಎಂದ ನಿರುದ್ಯೋಗಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಕೋಡ ಮಾರಿ ಎಂದರು. ಇದು ಉಡಾಫೆಯ ಮಾತಾಗಿತ್ತು.

 2019ರ ವೇಳೆಗಾಗಲೇ ಆರ್ಥಿಕ ಪರಿಸ್ಥಿತಿ ನೆಲಕಚ್ಚಿತ್ತು. 2020ರ ಮಾರ್ಚ್‌ ನಲ್ಲಿ ಕೊರೋನಾ ಸಾಂಕ್ರಾಮಿಕ ತಡೆಗಟ್ಟುತ್ತೇವೆಂದು ಹೇಳಿ ಎರಡೂವರೆ ತಿಂಗಳು ದೇಶದಾದ್ಯಂತ ಲಾಕ್ ಡೌನ್ ಮಾಡಲಾಯಿತು. ಬಹುತೇಕ ಉತ್ಪಾದನಾ ಘಟಕಗಳು ಬಂದ್ ಆದವು. ಕೋಟ್ಯಂತರ ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದರು. ಅವೈಜ್ಞಾನಿಕವಾಗಿ ಲಾಕ್ ಡೌನ್ ಮಾಡಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಮೇಲೂ ಉಂಟಾಯಿತು. ಅದು ಇನ್ನಷ್ಟು ಕುಸಿಯಿತು. ಲಾಕ್ ಡೌನ್ ಮುಗಿದ ನಂತರ ಕೊರೋನಾ ಸಾಂಕ್ರಮಿಕತೆಗೆ ಕಡಿವಾಣ ಬಿತ್ತೆ ಎಂದು ಪರಿಶೀಲಿಸಿದರೆ ಆಗಿದ್ದೇನು? ಕೊರೋನಾ ಪಿಡುಗಿನ ಹೆಚ್ಚಳ. ಅದು ಎಲ್ಲೆಡೆ ವ್ಯಾಪಿಸಿತ್ತು.

2021ರ ಮಾರ್ಚ್ ವೇಳೆಗೆ ಕೊರೊನ ಎರಡನೇ ಅಲೆ ಉಂಟಾಗಬಹುದು ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಪದೇಪದೇ ಎಚ್ಚರಿಸಿದರು. ಅವರ ಮಾತನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಂಡು ತನ್ನೆಲ್ಲ ಸಂಪನ್ಮೂಲಗಳನ್ನು ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ವಿನಿಯೋಗಿಸಬೇಕಿತ್ತು. ಕೊರೊನ ಎರಡನೇ ಅಲೆ ಕಾರಣದಿಂದ ಸದ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿ ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿಸಬೇಕಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅತ್ಯುತ್ಸಾಹದಿಂದ ಚುನಾವಣಾ ರ್ಯಾಲಿಗೆ ಸಿದ್ಧರಾದರು. ಪಂಚರಾಜ್ಯಗಳ ಚುನಾವಣೆ ನಡೆಯಿತು. ಸರಕಾರದ ಅಪತ್ಕಾಲದ ಬೊಕ್ಕಸದ ಅಪಾರ ಹಣ ಖರ್ಚಾಯಿತು.

 2021ರ ಮಧ್ಯಭಾಗದ ವೇಳೆಗಾಗಲೇ ಭಾರತದಾದ್ಯಂತ ಕೊರೊನ ಎರಡನೇ ಅಲೆಯ ದಿಢೀರ್ ಸ್ಫೋಟವಾಯಿತು. ಕೋಟ್ಯಂತರ ಮಂದಿ ಸೋಂಕಿತರಾದರು. ಮೇ ಮೊದಲ ವಾರದ ವೇಳೆಗೆ ಲಕ್ಷಾಂತರ ಮಂದಿ ಸೂಕ್ತ ಚಿಕಿತ್ಸೆಯಿಲ್ಲದ ಪರಿಣಾಮ ದಾರುಣ ಸಾವಿಗೀಡಾದರು.

ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದರೂ ಸೆಂಟ್ರಲ್ ವಿಸ್ಟಾ ಯೋಜನೆ ಆರಂಭಿಸಲಾಗಿತ್ತು. ಕೊರೋನಾ ಎರಡನೇ ಅಲೆಯ ಭೀಕರತೆಗಾದರೂ ಅಂಜಿ ಯೋಜನೆ ಸ್ಥಗಿತಗೊಳಿಸಬೇಕಾದ ತೀರ್ಮಾನ ತೆಗೆದುಕೊಳ್ಳಬೇಕಾದ ಪ್ರಧಾನಿ ಮೋದಿ ಭವ್ಯ ಕಟ್ಟಡಗಳ ಸಂರ್ಕೀರ್ಣ ಉದ್ಘಾಟಿಸುವ ಕನಸು ಕಾಣತೊಡಗಿದರು. ಇಡೀ ದೇಶ ನಿರಂತರ ದುಸ್ವಪ್ನ ಕಾಣುತ್ತಲೇ ಇದ್ದರೂ ಅವರು ಮಾತ್ರ ತಮ್ಮ ಭವ್ಯ ಮಹಲಿನ ಕನಸಿನಿಂದ ಇನ್ನೂ ಹೊರ ಬರದೇ ಇರುವುದು ದೇಶ ಓರ್ವ ಬೇಜವಾಬ್ದಾರಿ ವ್ಯಕ್ತಿಯ ಕೈಯಲಿದೆ ಎನ್ನುವುದಕ್ಕೆ ಸಾಕ್ಷಿ ಅಲ್ಲವೇ? ಇನ್ನೂ ಕೆಲವರಿಗೆ ಸೆಂಟ್ರಲ್ ವಿಸ್ಟಾ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ.

ತ್ರಿಕೋನಾಕರಾದ ಹೊಸ ಸಂಸತ್ ಭವನ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ತನಕದ 3 ಕಿಲೋ ಮೀಟರ್ ಮಾರ್ಗದ ನವೀಕರಣ, ಪ್ರಧಾನ ಮಂತ್ರಿ ನೂತನ ನಿವಾಸ, ಉಪರಾಷ್ಟ್ರಪತಿ ನೂತನ ನಿವಾಸ ಯೋಜನೆ. ಇವಿಷ್ಟು ಸೆಂಟ್ರಲ್ ವಿಸ್ಟಾ ಯೋಜನೆಯಡಿ ಬರುತ್ತದೆ. ಇದಕ್ಕಾಗಿ 20 ಸಾವಿರ ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ. ಕೊರೊನ ಸ್ಫೋಟಿಸುತ್ತಿರುವ ಈ ಹೊತ್ತಿನಲ್ಲೂ ಅದರ ನಿರ್ಮಾಣ ಕಾಮಗಾರಿ ನಿಂತಿಲ್ಲ. ಅಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೆ ಸೋಂಕಿನಿಂದ ತೊಂದರೆಯಾಗಬಹುದೆನ್ನುವ ಆತಂಕವೂ ಕೇಂದ್ರ ಸರ್ಕಾರಕ್ಕಿಲ್ಲ.

ಕುಸಿದ ಪ್ರತಿಷ್ಠೆ:

ಕೊರೊನಾ ಅಲೆಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿರಬಹುದು ಎನ್ನುವ ನಿರೀಕ್ಷೆ ಇತರ ರಾಷ್ಟ್ರಗಳಿಗಿತ್ತು. ಆದರೆ ಭಾರತದಲ್ಲಿ ಕೊರೋನಾ ಸೋಂಕು ಉಂಟು ಮಾಡಿರುವ ಭೀಕರತೆ, ಅಪಾರ ಸಾವು ನೋವು ಅವರುಗಳನ್ನೂ ತಲ್ಲಣಗೊಳಿಸಿದೆ. ಕನಿಷ್ಠ ಆಮ್ಲಜನಕ ಘಟಕಗಳ ವ್ಯವಸ್ಥೆ ಮಾಡಿಕೊಂಡಿದ್ದರೂ ಬಹುತೇಕ ಜೀವಗಳನ್ನು ಸಾವಿನಿಂದ ಪಾರು ಮಾಡಬಹುದಿತ್ತು ಎಂಬುದು ಅವರಿಗೆ ಖಚಿತವಾಗಿದೆ. ವಿಷಯ ಗೊತ್ತಿದ್ದೂ ಪೂರ್ವ ಸಿದ್ಧತೆ ಮಾಡಿಕೊಳ್ಳದ ಮೋದಿ ಸರ್ಕಾರ ಭಾರತದ ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸಿದೆ.

     ದೇಶದ ಆರ್ಥಿಕತೆ ಹೆಚ್ಚಳಕ್ಕೆ ಪಾಲು ನೀಡುವ ಉತ್ಪಾದನಾ ಘಟಕಗಳು ಮುಚ್ಚಿವೆ. ಜಿಡಿಪಿ ನೆಲಕಚ್ಚಿದೆ. ನಿರುದ್ಯೋಗ ಏರಿಕೆಯಾಗಿದೆ. ಕೊರೊನ ಸೋಂಕಿನ ಆರ್ಭಟ ಹೆಚ್ಚಿದೆ. ಸಾಲುಸಾಲು ಹೆಣಗಳ ಮೆರವಣಿಗೆ ಹೊರಟಿದೆ. ಆದರೆ ಮೋದಿ ಸರ್ಕಾರ ಭವ್ಯ ಮಹಲುಗಳ ಸಂಕೀರ್ಣದ ಉದ್ಘಾಟನೆ ತವಕದಲ್ಲಿದೆ.



Join Whatsapp