ಇರಾನ್ ಅಧ್ಯಕ್ಷೀಯ ಚುನಾವಣೆ | ಬೆಂಗಳೂರು ಸಹಿತ ದಕ್ಷಿಣ ಭಾರತದ ಈ ಮೂರು ನಗರಗಳಿಂದಲೂ ಮತದಾನ ಮಾಡಬಹುದು!
Prasthutha: June 17, 2021

ಹೈದರಾಬಾದ್ : ಇರಾನ್ ನ ಹದಿಮೂರನೇ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ತನ್ನ ನಾಗರಿಕರಿಗೆ ಅವರಿರುವ ಕಡೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇರಾನ್ ನಾಗರಿಕರು ಹೆಚ್ಚಾಗಿರುವ ಮೂರು ನಗರಗಳಲ್ಲಿ ತಮ್ಮ ಅಧ್ಯಕ್ಷೀಯ ಚುನಾವಣೆಯಂದೇ ಮತದಾನದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಭಾರತದ ಬೆಂಗಳೂರು, ಹೈದರಾಬಾದ್, ರಾಜಮುಂಡ್ರಿಯಲ್ಲಿ ಇರಾನ್ ನಾಗರಿಕರಿಗೆ ಮತದಾನಕ್ಕೆ ಅವಕಾಶ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಜೂ. 18(ನಾಳೆ)ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಇರಾನ್ ನಲ್ಲಿ ಮತದಾನವಿರುತ್ತದೆ. ಅದೇ ವೇಳೆ ಭಾರತದಲ್ಲೂ ಇರಾನ್ ವಿದ್ಯಾರ್ಥಿಗಳು, ನಾಗರಿಕರಿಗೆ ಮತದಾನ ಮಾಡುವ ಅವಕಾಶವಿದೆ.
18 ವರ್ಷಕ್ಕಿಂತ ಮೇಲಿರುವ ಇರಾನಿಯರು ಮತದಾನ ಮಾಡಬಹುದು. ಮತದಾನಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಹೈದರಾಬಾದ್ ನಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಪ್ರಧಾನ ಧೂತಾವಾಸದ ಮೂಲಗಳು ತಿಳಿಸಿವೆ.
ಹಾಲಿ ಅಧ್ಯಕ್ಷ ಹಸ್ಸನ್ ರುಹಾನಿ ಅವರ ಎರಡು ಅವಧಿ ಪೂರ್ಣಗೊಂಡಿದ್ದು, ಮುಂದಿನ ಅಧ್ಯಕ್ಷರಾಗಲು ಏಳು ಅಧ್ಯಕ್ಷೀಯ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
