ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 2023ರ ಆವೃತ್ತಿಗಾಗಿ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಂಡವನ್ನು ಬಲಿಷ್ಠಗೊಳಿಸಲು ಪ್ರಯತ್ನ ಆರಂಭಿಸಿವೆ. 16ನೇ ಆವೃತ್ತಿಗೂ ಮುಂಚಿತವಾಗಿ ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿಯನ್ನು ಮಂಗಳವಾರದಂದು (ನವೆಂಬರ್ 15) ಬಿಸಿಸಿಐಗೆ ಸಲ್ಲಿಸಿವೆ.
ಎರಡು ಬಾರಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಮೂವರು ವಿದೇಶಿ ಆಟಗಾರರು, ರಾಷ್ಟ್ರೀಯ ತಂಡದ ಪರ ಆಡುವ ಕಾರಣ ನೀಡಿ ಮುಂದಿನ ಐಪಿಎಲ್ನಿಂದ ಹಿಂದೆ ಸರಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಐಪಿಎಲ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇಬ್ಬರು ಪ್ರಮುಖ ಆಟಗಾರರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರಾದ, ಆಸ್ಟ್ರೇಲಿಯದ ಟೆಸ್ಟ್ ಮತ್ತು ಏಕದಿನ ಮಾದರಿಯ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಅಲೆಕ್ಸ್ ಹೇಲ್ಸ್ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರೀಯ ತಂಡದ ಪರ ಮಹತ್ವದ ಸರಣಿಗೆ ಸಜ್ಜಾಗಬೇಕಾದ ಹಿನ್ನಲೆಯಲ್ಲಿ ಐಪಿಎಲ್ನಿಂದ ವಿರಾಮ ಪಡೆಯುತ್ತಿರುವುದಾಗಿ ಕಮ್ಮಿನ್ಸ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಮುಂಬರುವ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿ ಹಾಗೂ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸಲುವಾಗಿ ಆಸ್ಟ್ರೇಲಿಯ ತಂಡವನ್ನು ಬಲಿಷ್ಠಗೊಳಿಸಲು ಮತ್ತು ಅದಕ್ಕೂ ಮೊದಲು ಅಲ್ಪ ವಿರಾಮ ಪಡೆಯಲು ನಿರ್ಧರಿಸಿದ್ದೇನೆ. ಈ ಕಾರಣದಿಂದ 2023ರ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ. ಇದೊಂದು ಕಠಿಣ ನಿರ್ಣಯವಾಗಿದ್ದು, ನನ್ನ ಈ ನಿಲುವಿಗೆ ಸಹಕರಿಸಿದ ಕೋಲ್ಕತ್ತಾ ಫ್ರಾಂಚೈಸಿಗೆ ಧನ್ಯವಾದ. ಕೆಕೆಆರ್ ಪರ ಐಪಿಎಲ್ ಟೂರ್ನಿ ಆಡುವಾಗ ತಂಡದ ಆಟಗಾರರು ಹಾಗೂ ಸಿಬ್ಬಂದಿಯೊಂದಿಗೆ ಕಳೆದ ಸಮಯ ಸ್ಮರಣೀಯವಾಗಿದೆ. ನಾನು ಮತ್ತೆ ಇದೇ ತಂಡದ ಭಾಗವಾಗುತ್ತೇನೆ ಎಂಬ ಭರವಸೆ ಇದೆ,” ಎಂದು ಪ್ಯಾಟ್ ಕಮಿನ್ಸ್ ಟ್ವೀಟ್ ಮಾಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ 5 ಪಂದ್ಯಗಳನ್ನಾಡಿದ್ದ ಕಮ್ಮಿನ್ಸ್, 63 ರನ್ ಹಾಗೂ 5 ವಿಕೆಟ್ ಕಬಳಿಸಿದ್ದರು. ಒಟ್ಟಾರೆ 42 ಐಪಿಎಲ್ ಪಂದ್ಯಗಳಿಂದ ಅವರು 379 ರನ್ ಹಾಗೂ 45 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.
ದೀರ್ಘ ಮಾದರಿಯ ಕ್ರಿಕೆಟ್ನ ಮೇಲೆ ಹೆಚ್ಚು ಗಮನಹರಿಸುವ ದೃಷ್ಟಿಯಿಂದ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದಾಗಿ ಸೋಮವಾರವಷ್ಟೇ ಕೆಕೆಆರ್ನ ಸ್ಯಾಮ್ ಬಿಲ್ಲಿಂಗ್ಸ್ ಘೋಷಿಸಿದ್ದರು. ಇದಾದ ಮರುದಿನವೇ ತಂಡದ ಮತ್ತೋರ್ವ ಪ್ರಮುಖ ಆಟಗಾರ ಹೊರನಡೆದಿರುವುದು 2 ಬಾರಿಯ ಚಾಂಪಿಯನ್ ತಂಡ ಕೊಲ್ಕತ್ತಾ ಪಾಲಿಗೆ ಆಘಾತವನ್ನುಂಟು ಮಾಡಿದೆ.
“ನಾನು ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಮುಂದಿನ ಐಪಿಎಲ್ನಲ್ಲಿ ಕೆಕೆಆರ್ ಪರವಾಗಿ ಆಡುವುದರಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಮುಂದಿನ ಬೇಸಿಗೆಯಲ್ಲಿ ಸುದೀರ್ಘ ಮಾದರಿಯ ಕ್ರಿಕೆಟ್ನ ಮೇಲೆ ಹೆಚ್ಚು ಗಮನಹರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆʼ ಎಂದು ಸ್ಯಾಮ್ ಬಿಲ್ಲಿಂಗ್ಸ್ ಸೋಮವಾರ ಟ್ವೀಟ್ ಮಾಡಿದ್ದರು.
ಮೂವರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿರುವ ಕೆಕೆಆರ್ ಫ್ರಾಂಚೈಸಿ, ʻಧನ್ಯವಾದಗಳುʼ ಎಂದು ಟ್ವೀಟ್ ಮಾಡಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್, ಗುಜರಾತ್ ಟೈಟನ್ಸ್ನಿಂದ ವೇಗಿ ಫರ್ಗ್ಯೂಸನ್ ಮತ್ತು ರಹ್ಮಾನುಲ್ಲಾ ಗುರ್ಬಾಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನಿಂದ ಶಾರ್ದುಲ್ ಠಾಕೂರ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.