ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್’ ನ ಮುಂದಿನ ಸೀಸನ್’ ನಲ್ಲಿ ಹೊಸ ಎರಡು ತಂಡಗಳ ಸೇರ್ಪಡೆಯಾಗಲಿದ್ದು, ಇದಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆಗೆ ದುಬೈನಲ್ಲಿ ಚಾಲನೆ ಸಿಕ್ಕಿದೆ.
ಸದ್ಯ ಐಪಿಎಲ್’ನಲ್ಲಿ 8 ತಂಡಗಳಿದ್ದು, ಮುಂದಿನ ವರ್ಷ ಇದು 10 ಆಗಲಿದೆ.
ಪ್ರತಿ ತಂಡದ ಮೂಲಬೆಲೆಯನ್ನು ಬಿಸಿಸಿಐ ಈಗಾಗಲೇ 2,000 ಕೋಟಿ ರು.ಗೆ ನಿಗದಿ ಪಡಿಸಿದೆ. 10 ಲಕ್ಷ ರುಪಾಯಿ ಪಾವತಿಸಿ 23 ಸಂಸ್ಥೆಗಳು ಟೆಂಡರ್ ಪ್ರತಿಯನ್ನು ಖದೀರಿಸಿವೆ.
ಬಿಡ್ಡಿಂಗ್ ಪ್ರಕ್ರಿಯೆಯು ಮೂಲ ಬೆಲೆ 2000 ಕೋಟಿಯಿಂದ ಆರಂಭವಾಗಲಿದ್ದು, ಗರಿಷ್ಠ 10 ಸಂಸ್ಥೆಗಳ ನಡುವೆ ಮಾತ್ರ ತಂಡ ಖರೀದಿಗೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಹೊಸ ಎರಡು ತಂಡಗಳ ಬಿಡ್ಡಿಂಗ್ ಮೂಲಕ ಬಿಸಿಸಿಐ ಕನಿಷ್ಠ 15 ಸಾವಿರ ಕೋಟಿ ಆದಾಯ ಗಳಿಸುವ ಆಲೋಚನೆ ಹೊಂದಿದೆ.
ತಂಡ ಖರೀದಿಸಲು ಮುಂದಾಗುವ ಸಂಸ್ಥೆ ಕಳೆದ 3 ವರ್ಷಗಳಲ್ಲಿ ವಾರ್ಷಿಕ 3,000 ಕೋಟಿ ರು. ವ್ಯವಹಾರ ನಡೆಸಿರಬೇಕಿದೆ. ಒಕ್ಕೂಟದಡಿ ತಂಡ ಖರೀದಿಸುವುದಾದರೆ ಪ್ರತಿ ಸದಸ್ಯ ಇಲ್ಲವೇ ಸಂಸ್ಥೆ ಕಳೆದ 3 ವರ್ಷಗಳಲ್ಲಿ ವಾರ್ಷಿಕ 2500 ಕೋಟಿ ರು. ವ್ಯವಹಾರ ನಡೆಸಿರಬೇಕು ಎನ್ನುವ ಷರತ್ತನ್ನು ಬಿಸಿಸಿಐ ವಿಧಿಸಿದೆ.
ಐಪಿಎಲ್’ನಲ್ಲಿ ತಂಡ ಖರೀದಿಸಲು ಖ್ಯಾತ ನಾಮರು ತೀವ್ರ ಆಸಕ್ತಿ ತೋರಿದ್ದಾರೆ. ಅದರಲ್ಲೂ ಅದಾನಿ ಗ್ರೂಪ್ ಹಾಗೂ ಸಂಜೀವ ಗೋಯೆಂಖಾ ಆರಂಭದಿಂದಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ಇವರ ಜತೆಗೆ ಕೋಟಕ್, ಅರುಬಿಂದೋ, ಟೋರೆಂಟ್ ಫಾರ್ಮಾ ಸಮೂಹ, ಇಂಗ್ಲಿಷ್ ಪ್ರೀಮಿಯರ್ ಲೀಗ್ನ ಅತ್ಯಂತ ಜನಪ್ರಿಯ ತಂಡ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಲಿಕರಾದ ಏವ್ರಮ್ ಗ್ಲೇಜರ್ ಕೂಡ ರೇಸ್’ನಲ್ಲಿ ಇದ್ದಾರೆ.
ಗೋಯೆಂಕಾ ಸಂಸ್ಥೆಯ ಮಾಲಿಕ ಸಂಜೀವ್ ಗೋಯೆಂಕಾ, 2 ವರ್ಷಗಳ ಕಾಲ ಪುಣೆ ಸೂಪರ್ಜೈಂಟ್ಸ್ ತಂಡದ ಮಾಲೀಕತ್ವ ಹೊಂದಿದ್ದರು.ನೂತನ ತಂಡಗಳಿಗೆ 7 ನಗರಗಳ ಪೈಕಿ ಒಂದು ನಗರವನ್ನು ಆಯ್ಕೆ ಅಹಮದಾಬಾದ್, ಲಖನೌ ಮೈದಾನದಲ್ಲಿ ಆಸನ ಸಾಮರ್ಥ್ಯ ಹೆಚ್ಚಿರುವ ಕಾರಣ ಫ್ರಾಂಚೈಸಿಗಳ ಪ್ರಥಮ ಆಯ್ಕೆ ಈ ಎರಡು ನಗರಗಳಾಗುವ ಸಾಧ್ಯತೆ ಹೆಚ್ಚಿದೆ. ಈ ಎರಡು ನಗರಗಳಲ್ಲದೆ ಇಂದೋರ್, ಗುವಾಹಟಿ, ಕಟಕ್, ಧರ್ಮಶಾಲಾ ಹಾಗೂ ಪುಣೆಯನ್ನು ಸಹ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.