ಐಫೋನ್ ಘಟಕ ಸ್ಥಾಪನೆ ಪ್ರಚಾರದ ಗಿಮಿಕ್: ಎಚ್‌ ಡಿಕೆ

Prasthutha|

ಬೆಂಗಳೂರು: ಐಫೋನ್ ಘಟಕ ಸ್ಥಾಪನೆ ಪ್ರಚಾರದ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ, ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ ಎಂದರು.

ಐಫೋನ್ ತಯಾರಿಸುವ ತೈವಾನ್ ದೇಶದ ಫಾಕ್ಸ್ಕಾನ್ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯ್ಯಲ್ಲಿ ಸಹಿಪತ್ರಗಳನ್ನಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು ಎಂದರು.

- Advertisement -

ಆ ಬೆನ್ನಲ್ಲೇ ತೈವಾನಿನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಂಪನಿ, “ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ” ಎಂದು ಸ್ಪಷ್ಟಪಡಿಸಿದೆ. ಹಾಗಾದರೆ, ಶುಕ್ರವಾರ ಮಾನ್ಯ ಬೊಮ್ಮಾಯಿ ಅವರ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ? ಜನರಿಗೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಕೋವಿಡ್ ನಂತರದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪನಿ ಕರ್ನಾಟಕದ ಕೈ ಜಾರಿತು. 7,614 ಕೋಟಿ ರೂ. ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು ಎಂದರು.

ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಸರಕಾರಕ್ಕೆ ಅಧಿಕಾರವೇ ಮುಖ್ಯ. ಉಳಿದಿದ್ದೆಲ್ಲ ಅಮುಖ್ಯ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ ಎಂದರು.

Join Whatsapp