ತುಮಕೂರು: ಕಾರು ನೋಡಲು ಬಂದ ಗ್ರಾಹಕನ ಬಟ್ಟೆ ನೋಡಿ ಕಾರು ಶೋ ರೂಮ್ ಸಿಬ್ಬಂದಿ ನಿನ್ನ ಕೈಯಲ್ಲಿ ಹತ್ತು ಲಕ್ಷ ಕೊಟ್ಟು ಕಾರು ಖರೀದಿ ಮಾಡಲು ಸಾಧ್ಯನಾ ಎಂದು ಅವಮಾನಿಸಿದ್ದು, ಇದರಿಂದ ಬೇಸತ್ತ ಗ್ರಾಹಕ ಹಣ ತಂದು ಕಾರು ನೀಡುವಂತೆ ಪಟ್ಟು ಹಿಡಿದಿದ್ದ ಘಟನೆ ತುಮಕೂರಿನಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎನ್ನುವ ಯುವಕನೊಬ್ಬ ನಗರದ ಖಾಸಗಿ ಕಾರ್ ಶೋರೂಮ್ ಗೆ ಕಾರು ತೆಗೆದುಕೊಳ್ಳಲು ಬಂದಿದ್ದು, ಯುವಕನ ವೇಷಭೂಷನ ನೋಡಿ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಕೆಂಪೇಗೌಡನಿಗೆ ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ನಿನಗೆ, ಕಾರು ಖರೀದಿಸಲು ಬಂದಿದ್ದೀಯಾ ಎಂದು ಅವಮಾನಿಸಿದ್ದಾನೆ.
ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಒಂದು ಗಂಟೆಯಲ್ಲಿ ದುಡ್ಡು ತರುವೆ ಕಾರನ್ನು ನೀಡುವೆಯಾ ಎಂದು ಕಡ್ಡಿ ಮುರಿದ ಹಾಗೆ ಕೇಳಿದ್ದು, ಇದಕ್ಕೆ ಒಪ್ಪಿದ ಶೋರೂಮ್ ಕೆಲಸಗಾರ ಮೊದಲು ದುಡ್ಡು ತನ್ನಿ ಕಾರು ಕೊಡುವೆ ಎಂದಿದ್ದಾರೆ. ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ತಂದು ಕಾರು ನೀಡುವಂತೆ ಪಟ್ಟು ಹಿಡಿದಿದ್ದು, ಶೋ ರೂಮ್ ಕೆಲಸಗಾರರು ಇಲ್ಲಸಲ್ಲದ ಸಬೂಬು ಹೇಳಿ ಮುಂದಿನ ಎರಡು ದಿನದಲ್ಲಿ ಕಾರು ನೀಡುತ್ತೇವೆ ಎಂದಿದ್ದಾರೆ. ನಮ್ಮನ್ನು ಅವಮಾನಿಸುವ ಮುಂಚೆ ಇದರ ಅರಿವು ತಮಗೆ ಇರಬೇಕಾಗಿತ್ತು. ನಾನು ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದಿದ್ದೇನೆ. ನನಗೆ ಈಗ ಕಾರು ಕೊಡಿ ಎಂದು ಗ್ರಾಹಕ ಕೆಂಪೇಗೌಡ ಹಾಗೂ ಸ್ನೇಹಿತರು ಶೋರೂಮ್ ನಲ್ಲಿ ವಾಗ್ವಾದ ನಡೆಸಿದ್ದಾರೆ.
ಒಮ್ಮತದ ನಿರ್ಧಾರಕ್ಕೆ ಬರದ ಕಾರಣ ಕೊನೆಗೆ ಗ್ರಾಹಕ ಹಾಗೂ ಶೋರೂಮ್ ನವರು ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲು ಏರುವಂತಾಯಿತು.
ಕೊನೆಗೆ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.