ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಬ್ಬ ಅಮಾಯಕನ ಕೊಲೆಯಾದಾಗ ಆಕ್ರೋಶ ಇರಲಿದೆ. ಕೇರಳ ಗಡಿ ದಾಟಿ ಕೊಲೆಗಾರರ ಹಿಡಿಯಲು ಗೃಹಸಚಿವರು, ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅಂಗಡಿ ಬಾಗಿಲು ಮುಚ್ಚುವ ವೇಳೆ ಯಾರೂ ಇಲ್ಲದಿರುವಾಗ ಕೊಲೆ ನಡೆದಿದೆ. ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಒಂದು ವ್ಯವಸ್ಥಿತ ಸಂಚು. ಕ್ಷೋಭೆ ಉಂಟು ಮಾಡುವ ವರ್ಗದಿಂದ ಕೊಲೆ ಮಾಡಲಾಗಿದೆ. ಆ ವರ್ಗವನ್ನು ಸದೆ ಬಡಿಯುವ ಕೆಲಸ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ಅಲ್ಲಿನ ಜನರಲ್ಲಿ ಆಕ್ರೋಶ ಇದೆ. ಶಾಂತಿ ಕಾಪಾಡಲು ಮನವಿ ಮಾಡಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕಾರುತ್ತಿಲ್ಲ. ಆ ಘಟನೆ ನಡೆಯಬಾರದಿತ್ತು ಎನ್ನುವ ಆಕ್ರೋಶ ಅವರದ್ದು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶಕ್ಕೆ ಅವರು ಸ್ಪಷ್ಟನೆ ನೀಡಿದರು.