ಅ.31ರೊಳಗೆ ಎಲ್ಲಾ ಬಸ್ಸುಗಳಲ್ಲಿ ‘CCTV’ ಅಳವಡಿಕೆ ಕಡ್ಡಾಯ: ಕೇರಳ ಸಾರಿಗೆ ಸಚಿವ

Prasthutha|

ತಿರುವನಂತಪುರಂ: ಕೇರಳ ಸಾರಿಗೆ ಸಚಿವ ಆಂಟನಿ ರಾಜು ಮಹತ್ವದ ಹೇಳಿಕೆ ನೀಡಿದ್ದು, ಅಕ್ಟೋಬರ್ 31 ರೊಳಗೆ ಕೇರಳ ರಾಜ್ಯದ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸೇರಿದಂತೆ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ. ನಿಯಮ ಉಲ್ಲಂಘನೆಗಳು, ಅಪಘಾತಗಳ ಹಿಂದಿನ ಕಾರಣಗಳು ಮತ್ತು ಅಪರಾಧಿಗಳನ್ನು ಗುರುತಿಸಲು ಈ ಕ್ರಮ ಮಾಡಲಾಗುತ್ತಿದೆ ಎಂದು ರಾಜು ಹೇಳಿದರು.

- Advertisement -

ನವೆಂಬರ್ 1 ರಿಂದ ಭಾರಿ ವಾಹನಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗುವುದು ಎಂದೂ ಹೇಳಿದ ಅವರು, ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿಲ್ಲದ ಕಾರಣ ಕ್ಯಾಮೆರಾಗಳನ್ನು ಸ್ಥಾಪಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿದರು. ಈ ಬಾರಿ ಗಡುವನ್ನು ವಿಸ್ತರಿಸಲು ಅನುಮತಿಸಲಾಗುವುದಿಲ್ಲ. ಬಸ್ ನ ಒಳಗೆ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ರಾಜು ಹೇಳಿದರು. ಖಾಸಗಿ ಬಸ್ ಗಳ ವಿರುದ್ಧ ವ್ಯಾಪಕ ದೂರುಗಳು ಇರುವ ಕೊಚ್ಚಿಯಲ್ಲಿ ಮೊದಲ ಸುತ್ತಿನ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.


ಇತ್ತೀಚೆಗೆ ಕೋಯಿಕ್ಕೋಡ್ನಲ್ಲಿ ಬೈಕ್ನಲ್ಲಿದ್ದ ದಂಪತಿ ಸಾವನ್ನಪ್ಪಿದ ಘಟನೆ ಮತ್ತೊಂದು ಬಸ್ಸಿನ ಹಿಂಭಾಗದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರನ್ನು ಹಿಂಬಾಲಿಸಿದ ಚಾಲಕ ಬ್ರೇಕ್ ಹಾಕಲು ವಿಫಲವಾದ ಕಾರಣ ದಂಪತಿ ಎರಡು ಬಸ್ ಗಳ ನಡುವೆ ಸಿಲುಕಿಕೊಂಡಿದ್ದರು. ಅಪಘಾತದ ದೃಶ್ಯ ವೈರಲ್ ಆದ ನಂತರ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

- Advertisement -

ಸಮಯದ ಸಮಸ್ಯೆಯಿಂದಾಗಿ ಬಸ್ಸುಗಳು ಸ್ಪೀಡ್ ರೇಸ್ ನಲ್ಲಿ ತೊಡಗುತ್ತವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ, ಈ ಬಗ್ಗೆ ಪರಿಶೀಲಿಸಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.