ಕ್ರಿಸ್ ಮಸ್ ಹಬ್ಬದ ಪ್ರಶ್ನೆಗೆ ‘ಇನ್ಶಾಅಲ್ಲಾಹ್’ ಪದ ಉಲ್ಲೇಖಿಸಿದ ಇಂಗ್ಲೆಂಡ್ ಆರೋಗ್ಯ ಸಚಿವ

Prasthutha|

ಲಂಡನ್ : ಕೊರೊನ ವೈರಸ್ ಸೋಂಕಿನ ಸಂಕಷ್ಟದ ನಡುವೆಯೂ, ಈ ವರ್ಷದ ಕ್ರಿಸ್ ಮಸ್ ಕರೋಲ್ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿರುವ ಬ್ರಿಟಿಷ್ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕೊಕ್, ‘ದೇವರ ದಯೆಯಿದ್ದರೆ’ ಎಂಬುದನ್ನು ಉಲ್ಲೇಖಿಸಲು ‘ಇನ್ಶಾಅಲ್ಲಾಹ್’ ಎಂಬ ಪದ ಬಳಸಿದ್ದಾರೆ.

‘ಇನ್ಶಾಅಲ್ಲಾಹ್’ ದೇವರ ದಯೆಯಿದ್ದರೆ ಎಂಬ ಅರ್ಥದ ಅರೇಬಿಕ್ ಮೂಲದ ಪದವಾಗಿದೆ. ಎಲ್ ಬಿಸಿ ರೇಡಿಯೊ ಸಂದರ್ಶನದಲ್ಲಿ ಹ್ಯಾಂಕೊಕ್ ಈ ಹೇಳಿಕೆ ನೀಡಿದ್ದಾರೆ.

- Advertisement -

ಎಲ್ ಬಿಸಿ ನಿರೂಪಕರಾದ ನಿಕ್ ಫೆರಾರಿ ಕ್ರಿಸ್ ಮಸ್ ಕರೋಲ್ ಸಂಗೀತ ಕಾರ್ಯಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ಮೊದಲು ದೀರ್ಘ ಮೌನವೊಂದನ್ನು ಮುರಿದು, ‘ಇನ್ಶಾಅಲ್ಲಾಹ್’ ಎಂದು ಉಲ್ಲೇಖಿಸಿದರು. ಪ್ರಧಾನಿಯವರು ಮೊದಲು ಸಂಸತ್ತಿನಲ್ಲಿ ಮಾತನಾಡಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಈ ವೇಳೆ ತಿಳಿಸಿದರು.

ಹ್ಯಾಂಕೊಕ್ ಅವರ ಹೇಳಿಕೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕ್ರಿಸ್ ಮಸ್ ಹಬ್ಬದ ಉಲ್ಲೇಖದ ವೇಳೆ ಇಸ್ಲಾಮಿಕ್ ಪದ ಬಳಸಿದುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಕೆಲವರು ಸ್ವಾಗತಿಸಿದ್ದಾರೆ. ಇನ್ನು ಕೆಲವರು ಹ್ಯಾಂಕೊಕ್ ಅವರು ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

- Advertisement -