ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಮುಂದಾದ ಪತಿ, ಮುಂದಾಗಿದ್ದು ದುರಂತ !

Prasthutha|

ಚೆನ್ನೈ: ಯೂಟ್ಯೂಬ್’ನಲ್ಲಿ ವೀಡಿಯೋ ನೋಡಿ ತನ್ನ ಪತ್ನಿಯ ಹೆರಿಗೆ ಮಾಡಿಸಲು ಮುಂದಾದ ಪತಿಯ ಅವಾಂತರದಿಂದಾಗಿ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಮಿಳುನಾಡಿನ ರಾಣಿಪೆಟ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರಾಣಿಪೆಟ್ ಜಿಲ್ಲೆಯ ಪನಪಕ್ಕಂ ಎಂಬಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದ ಲೋಕನಾಥನ್ (32), ತನ್ನ ಪತ್ನಿ ಗೋಮತಿ (28) ಇಚ್ಚೆಯಂತೆ ಯೂಟ್ಯೂಬ್ ವೀಡಿಯೋಗಳನ್ನು ನೋಡಿ ಹೆರಿಗೆ ಮಾಡಿಸಲು ಯತ್ನಿಸಿದ್ದಾನೆ. ಆದರೆ ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ಮಗು ಮೃತಪಟ್ಟ ಸ್ಥಿತಿಯಲ್ಲಿ ಹೆರಿಗೆಯಾಗಿದೆ. ವಿಪರೀತ ರಕ್ತಸ್ರಾವವಾದ ಕಾರಣ ಗೋಮತಿಯನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ರಾಣಿಪೆಟ್ ಜಿಲ್ಲಾ ಆರೋಗ್ಯ ನಿರ್ದೇಶಕ ವಿ. ಮಣಿಮಾರನ್, ದಂಪತಿ ಪರಸ್ಪರ ಒಪ್ಪಿ ಈ ಕೃತ್ಯವೆಸಗಿದ್ದು, ಶಿಶುವಿನ ಮರಣಕ್ಕೆ ಕಾರಣರಾದವರ ಇಬ್ಬರ ವಿರುದ್ಧವೂ ನೆಮ್ಮಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಲೋಕನಾಥನ್ -ಗೋಮತಿ ಕಳೆದ ವರ್ಷ ವಿವಾಹಿತರಾಗಿದ್ದರು. ಡಿಸೆಂಬರ್ 18ರಂದು ಗೋಮತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು, ಪತಿ ಲೋಕನಾಥನ್ ತನ್ನ ಸಹೋದರಿ ಗೀತಾಳ ಜೊತೆ ಸೇರಿ ಯೂಟ್ಯೂಬ್ ವೀಡಿಯೋ ನೋಡಿ ಹೆರಿಗೆ ಮಾಡಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp