ಮದ್ಯ ಸೇವಿಸಿ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ: ಇಂಡಿಗೋ ವಿಮಾನದ ಇಬ್ಬರು ಪ್ರಯಾಣಿಕರ ಬಂಧನ

Prasthutha|

ನವದೆಹಲಿ: ವಿಮಾನದಲ್ಲಿ ಮದ್ಯ ಸೇವಿಸಿ ಮಹಿಳೆಯ ಮೇಲೆ ಮೂತ್ರ ಮಾಡಿದ ಶಂಕರ್ ಮಿಶ್ರಾನ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

- Advertisement -

ಮದ್ಯ ಸೇವಿಸಿ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ದೆಹಲಿ-ಪಾಟ್ನಾ ಇಂಡಿಗೊ ವಿಮಾನದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ದೆಹಲಿಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೊ 6ಇ-6383 ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣ ಪೊಲೀಸರು, ಸಿಐಎಸ್’ಎಫ್ ನೆರವಿನೊಂದಿಗೆ ಬಂಧಿಸಿದ್ದಾರೆ.

- Advertisement -

ಇಂಡಿಗೋ ಮ್ಯಾನೇಜರ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ಎಸ್’ಎಚ್’ಒ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರೋಹಿತ್ ಮತ್ತು ನಿತೀಶ್ ಎಂಬ ಇಬ್ಬರು ಪ್ರಯಾಣಿಕರನ್ನು ಭಾನುವಾರ ರಾತ್ರಿ (ಜನವರಿ 8) ಪಾಟ್ನಾ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

 ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಮುಂಬೈ ಮೂಲದ ಬ್ಯಾಂಕರ್ ಶಂಕರ್ ಮಿಶ್ರಾ ಎಂಬಾತನನ್ನು ಬಂಧಿಸಿದ ಎರಡು ದಿನಗಳ ನಂತರ ದೇಶೀಯ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ವಿಮಾನದಲ್ಲಿದ್ದ ಇತರ ಪ್ರಯಾಣಿಕರ ಪ್ರಕಾರ, ಮೂವರು ಯುವಕರು ವಿಮಾನದಲ್ಲಿ ಗಲಾಟೆ ಮಾಡಿದ್ದಾರೆ. ಇದರಲ್ಲಿ ಒಬ್ಬ ಯುವಕ ಅವಕಾಶ ನೋಡಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಗಗನಸಖಿ ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಇದನ್ನು ಕೆಲವು ಪ್ರಯಾಣಿಕರು ವಿರೋಧಿಸಿದ್ದಾರೆ.

Join Whatsapp