ಏರ್​ಬಸ್​ನಿಂದ 500 ವಿಮಾನ ಖರೀದಿಸಲಿರುವ ಇಂಡಿಗೋ; ದಾಖಲೆಯ ಒಪ್ಪಂದ

Prasthutha|

ಹೊಸದಿಲ್ಲಿ: ವಿಮಾನಯಾನ ಕ್ಷೇತ್ರದಲ್ಲೇ ಅತಿದೊಡ್ಡದು ಎನ್ನಲಾದ ಒಪ್ಪಂದಕ್ಕೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಸಹಿ ಹಾಕಿದೆ.

- Advertisement -

ಏರ್​​ಬಸ್​​ನಿಂದ 50 ಶತಕೋಟಿ ಡಾಲರ್ ವೆಚ್ಚದಲ್ಲಿ 500 ‘A320’ ವಿಮಾನಗಳನ್ನು ಖರೀದಿಸುವುದಾಗಿ ಇಂಡಿಗೋ ಸೋಮವಾರ ಘೊಷಿಸಿದೆ. ಈ ಒಪ್ಪಂದಕ್ಕೆ ಇಂಡಿಗೋ ಕಂಪನಿಗೆ ಭಾರೀ ರಿಯಾಯಿತಿಯ ಕೊಡುಗೆ ದೊರೆತಿದೆ ಎನ್ನಲಾಗಿದೆ. ಟಾಟಾ ಗ್ರೂಪ್ ಇತ್ತೀಚೆಗೆ ಏರ್ ಇಂಡಿಯಾಗೆ 470 ವಿಮಾನಗಳನ್ನು ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಈವರೆಗಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದವಾಗಿತ್ತು. ಇದೀಗ ಟಾಟಾ ಗ್ರೂಪ್​ ಅನ್ನು ಇಂಡಿಗೋ ಮೀರಿಸಿದೆ.

ಪ್ಯಾರಿಸ್​​ನಲ್ಲಿ ನಡೆಯುತ್ತಿರುವ ಏರ್​​ ಶೋದಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಎಂಡಿ ರಾಹುಲ್ ಭಾಟಿಯಾ ನೇತೃತ್ವದ ಇಂಡಿಗೋ ಪ್ರವರ್ತಕರ ತಂಡ ಮತ್ತು ಏರ್​ಬಸ್​​ನ ಸಿಇಒ ಗುಯಿಲೌಮ್ ಫೌರಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

- Advertisement -

2006 ರಲ್ಲಿ ಆರಂಭವಾದಾಗಿನಿಂದ ಇಂಡಿಗೋ ಕಂಪನಿಯು ಈವರೆಗೆ ಏರ್‌ಬಸ್‌ನಿಂದ ಒಟ್ಟು 1,330 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ಇಂಡಿಗೋದ 310 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಇಂಡಿಗೋ ಪ್ರಕಾರ, ಏರ್​ಬಸ್​​ನ ‘A320’ ವಿಮಾನದಿಂದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.

ಕೆಲವು ತಿಂಗಳುಗಳ ಹಿಂದಷ್ಟೇ ಫ್ರಾನ್ಸ್ ದೇಶದ ಏರ್​ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಟಾಟಾ ಗ್ರೂಪ್​ನ ಏರ್ ಇಂಡಿಯಾ ಸಂಸ್ಥೆ ಅದಾಗಿ ಕೆಲವು ದಿನಗಳ ನಂತರ ಅಮೆರಿಕದ ಬೋಯಿಂಗ್​ನಿಂದ 220 ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿತ್ತು. ಇದರೊಂದಿಗೆ ಒಟ್ಟು 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಂತಾಗಿತ್ತು. ಇದು ದೇಶದ ಇತಿಹಾಸದಲ್ಲಿ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎನ್ನಲಾಗಿತ್ತು. ಇದೀಗ ಇಂಡಿಗೋ ಇದನ್ನು ಮೀರಿಸಿದೆ.



Join Whatsapp