ಇಸ್ಲಾಮಾಬಾದ್: ಭಾರತದ ಅನಿಯಂತ್ರಿತ ಶಸ್ತ್ರಾಸ್ತ್ರ ಖರೀದಿಯಿಂದಾಗಿ ಶಾಂತಿ ಮತ್ತು ಸ್ಥಿರತೆಗೆ ಭಂಗ ಉಂಟಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಅಸಿಮ್ ಇಫ್ತಿಕಾರ್ ಅಹ್ಮದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಲವು ವರ್ಷಗಳಿಂದ ಭಾರತದ ಯುದ್ಧೋನ್ಮಾದ ಮತ್ತು ಅನಿಯಂತ್ರಿತ ಶಸ್ತ್ರಾಸ್ತ್ರ ಖರೀದಿಯಿಂದಾಗಿ ನಮ್ಮ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆ, ಅಸಮತೋಲನವು ಮತ್ತಷ್ಟು ಉಲ್ಬಣಗೊಂಡಿದೆ. ಇದು ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ಉಂಟುಮಾಡಬಹುದು ಎಂಬುದು ಪಾಕಿಸ್ತಾನದ ದೀರ್ಘಕಾಲದ ಕಾಳಜಿಯಾಗಿದೆ” ಎಂದು ಎಫ್ ಒ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನವುಈ ಕಳವಳಗಳನ್ನು ಮಿತ್ರರಾಷ್ಟ್ರಗಳಲ್ಲಿ ಮತ್ತು ಅಂತರರಾಷ್ಟ್ರೀಯ ಸಮುದಾಯದ ಸ್ನೇಹಿತರು ಮತ್ತು ಸದಸ್ಯರೊಂದಿಗೆ ಹಂಚಿಕೊಂಡಿದೆ ಮತ್ತು ವಿಶ್ವಸಂಸ್ಥೆಯ ಸಂಬಂಧಿತ ವೇದಿಕೆಗಳಲ್ಲಿ ಈ ವಿಷಯಗಳನ್ನು ಎತ್ತಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಗಡಿಯಿಂದ ಸುಮಾರು 90-100 ಕಿ.ಮೀ ದೂರದಲ್ಲಿರುವ ಪಂಜಾಬ್ ನ ಆದಂಪುರ ಮತ್ತು ಹಲ್ವಾರಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ತನ್ನ ಮೊದಲ ಬ್ಯಾಚ್ ನ ಎಸ್ -400 ರಷ್ಯಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಎಫ್ ಒ ವಕ್ತಾರರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.