►ಹೈದರಾಬಾದ್ ನಿಝಾಮಿಯಾ ವಿವಿಯಲ್ಲಿ ಸೂರಾ :ಯಾಸೀನ್ ನ ಕ್ಯಾಲಿಗ್ರಫಿ !
ಅನಿಲ್ ಚೌಹಾನ್ ಎನ್ನುವ ಹೈದರಾಬಾದ್ ಮೂಲದ ಕ್ಯಾಲಿಗ್ರಫರ್ ಕಲಾವಿದರೊಬ್ಬರ ಕೈಚಳಕವು ಭಾರತದ 200ಕ್ಕೂ ಹೆಚ್ಚು ಮಸೀದಿಗಳಲ್ಲಿ ರಾರಾಜಿಸುತ್ತಿದೆ. ತನ್ನ ಮೂವತ್ತು ವರ್ಷಗಳ ವೃತ್ತಿ ಜೀವನದಲ್ಲಿ ದೇಶದ ಉದ್ದಗಲದ ಅದೆಷ್ಟೊ ಮಸೀದಿಗಳಲ್ಲಿ ಚೌಹಾನ್ ಕ್ಯಾಲಿಗ್ರಫಿಯ ಮೂಲಕ ಕುರಾನ್ ವಚನಗಳನ್ನು ಬರೆದಿದ್ದಾರೆ. ಹೈದರಾಬಾದಿನ ಅಂಗಡಿಯೊಂದರಲ್ಲಿ ಉರ್ದು ಲಿಪಿಯ ಮೂಲಕ ಸೂಚನಾ ಫಲಕಗಳನ್ನು ಪೈಂಟಿಂಗ್ ಮಾಡುತ್ತಿದ್ದಾಗ ತನ್ನ ಸ್ವಯಂ ಆಸಕ್ತಿಯ ಮೂಲಕ ಅರೇಬಿಕ್ ಕ್ಯಾಲಿಗ್ರಫಿಯನ್ನೂ ಕಲಿಯಲಾರಂಭಿಸಿದ್ದರು.
30 ವರ್ಷಗಳ ಹಿಂದೆ ತಾನು ಕೆಲಸ ಮಾಡಿಕೊಂಡಿದ್ದ ಹೈದರಬಾದ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ಇದ್ದ ಕಾರಣ ಗತ್ಯಂತರವಿಲ್ಲದೆ ನಾನು ಉರ್ದು ಕಲಿಯಲೇಬೇಕಿತ್ತು. ಅದು ನನ್ನ ವೃತ್ತಿಗೂ ಅನಿವಾರ್ಯವಾಗಿತ್ತು. ಹೀಗಾಗಿ ಉರ್ದು ಬರೆಯುತ್ತಲೇ ಅರೇಬಿಕನ್ನು ಕೂಡಾ ಕಲಿತೆ ಎಂದು ಚೌಹಾನ್ ಹೇಳುತ್ತಾರೆ. 100ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ಚೌಹಾನ್ ತಾನು ನಿರ್ಮಿಸಿದ ಕ್ಯಾಲಿಗ್ರಫಿಗೆ ಹಣ ಪಡೆಯಲೇ ಇಲ್ಲ ಎಂದು ಹೇಳುತ್ತಾರೆ. ಅದನ್ನು ನಾನು ಮಸೀದಿಗೆ ದಾನವಾಗಿ ನೀಡಿದ್ದೇನೆ ಎಂದವರು ಹೇಳುತ್ತಾರೆ. ಮಸೀದಿಯ ಜೊತೆಗೆ ನಾನು 30ಕ್ಕೂ ಹೆಚ್ಚು ದೇವಸ್ಥಾನಗಳ ಬರಹಗಳನ್ನು ಕೂಡಾ ಕ್ಯಾಲಿಗ್ರಫಿಯ ಮೂಲಕ ಬರೆದಿದ್ದೇನೆ ಎಂದಿದ್ದಾರೆ.
1990ರಲ್ಲಿ ಚೌಹಾನ್ ಅವರ ಜೀವನದ ಬಹುದೊಡ್ಡ ತಿರುವು ಎಂದರೆ ಹೈದರಾಬಾದಿನ ಐತಿಹಾಸಿಕ ನೂರ್ ಮಸೀದಿಯಲ್ಲಿ ಕುರಾನ್ ವಚನಗಳನ್ನು ಬರೆಯುವಂತೆ ಕೇಳಿಕೊಳ್ಳಲಾಯಿತು. ಆ ಬಳಿಕ ಎಲ್ಲರೂ ನನ್ನನ್ನು ಗುರುತಿಸುವಂತಾಯಿತು ಎಂದು ಚೌಹಾನ್ ನೆನಪಿಸುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹಲವರ ವಿರೋಧಗಳನ್ನು ಕೂಡಾ ಎದುರಿಸಬೇಕಾಗಿತ್ತು. ಆಗ ಹೈದರಾಬಾದ್ ಜಾಮಿಯಾ ನಿಝಾಮಿಯಾ ವಿಶ್ವವಿದ್ಯಾನಿಲಯ ಚೌಹಾನ್ ಪರ ತೀರ್ಪು ನೀಡಿತ್ತು. ಮಾತ್ರವಲ್ಲ ವಿವಿಯು ತನ್ನ ಕ್ಯಾಂಪಸ್ಸಿನ ಮುಖ್ಯ ಗ್ಯಾಲರಿಯಲ್ಲಿ 6 ಅಡಿ ಉದ್ದ ಮತ್ತು4 ಅಡಿ ಅಗಲದ ಕಾನ್ವಾಸ್ ನಲ್ಲಿ ಚೌಹಾನ್ ಅವರು ಕ್ಯಾಲಿಗ್ರಫಿ ಮೂಲಕ ಬರೆದಿದ್ದ ಸೂರಾ: ಯಾಸೀನನ್ನು ತೂಗು ಹಾಕಿದ್ದರು.