ವಾಷಿಂಗ್ಟನ್: ಸಿಯಾಟಲ್ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು 23 ವರ್ಷದ ಭಾರತೀಯ ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ಸೌತ್ ಲೇಕ್ ಯೂನಿಯನ್’ನಲ್ಲಿ ನಡೆದಿದೆ.
ಮೃತಪಟ್ಟ ಯುವತಿಯನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ ಕಂದುಲಾ ಎಂದು ಗುರುತಿಸಲಾಗಿದೆ. ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರಾವಸ್ಥೆಯಲ್ಲಿದ್ದ ಪಾದಚಾರಿ ಯುವತಿಯನ್ನು ಹಾರ್ಬರ್ ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಸಿಯಾಟಲ್ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಜಾಹ್ನವಿ ಕಂದುಲಾ ಅವರು ಸೌತ್ ಲೇಕ್ ಯೂನಿಯನ್’ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲಿ ವಿದ್ಯಾರ್ಥಿಯಾಗಿದ್ದರು. ಅವರು ಡಿಸೆಂಬರ್’ನಲ್ಲಿ ಇನ್ಫಾರ್ಮೇಷನ್ ಸಿಸ್ಟಂನಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರಿದ್ದರು ಎಂದು ತಿಳಿದುಬಂದಿದೆ.
ಗಸ್ತು ವಾಹನ SUV ಅನ್ನು ಚಾಲನೆ ಮಾಡುವ ಅಧಿಕಾರಿಯು ಡೆಕ್ಸ್ಟರ್ ಅವೆನ್ಯೂ ನಾರ್ತ್’ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದಾಗ ಪಾದಚಾರಿ ಯುವತಿ ಕ್ರಾಸ್ ವಾಕ್’ನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ದಾಟುತ್ತಿದ್ದರು. ಈ ವೇಳೆ ವಾಹನವು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.