ಮಂಗಳೂರು | ಭಾರತೀಯ ಐ ಐ ಟಿ ಗಳು ವಿಶ್ವಮಟ್ಟದ ಬ್ರ್ಯಾಂಡ್: ಧರ್ಮೇಂದ್ರ ಪ್ರಧಾನ್

Prasthutha|

ಮಂಗಳೂರು: ಭಾರತೀಯ ಐ.ಐ.ಟಿ.ಗಳು ವಿಶ್ವಮಟ್ಟದ ಬ್ರ್ಯಾಂಡ್ ಆಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿದೇಶಗಳಲ್ಲಿಯೂ ಸ್ಥಾಪನೆಯಾಗಲಿವೆ ಎಂದು ಕೇಂದ್ರದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು.

- Advertisement -

 ಅವರು ಶನಿವಾರ ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್.ಐ.ಟಿ.ಕೆ.)ಯಲ್ಲಿ ಕೇಂದ್ರೀಯ ಸಂಶೋಧನಾ ಸೌಲಭ್ಯ (ಸಿ.ಆರ್.ಎಫ್.)ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 ಭಾರತದ ಅಂತಃಸತ್ವವನ್ನು ಹೊಂದಿರುವ ಐ.ಐ.ಟಿ. ಮತ್ತು ಐಐಟಿಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ, ಅವು ಜ್ಞಾನದ ದೇಗುಲಗಳು. ಬರುವ ದಿನಗಳಲ್ಲಿ 10ಕ್ಕೂ ಹೆಚ್ಚಿನ ದೇಶಗಳಲ್ಲಿ ಐಐಟಿಗಳ ಸ್ಥಾಪನೆಯಾಗಲಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ನೆರವಿನಿಂದ ಹೊರದೇಶಗಳಲ್ಲಿ ಐಐಟಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ, ಆ ಪರಿಣಾಮ ಭವಿಷ್ಯದಲ್ಲಿ ಸಾಗರೋತ್ತರ ಐ.ಐ.ಟಿ. ಕ್ಯಾಂಪಸ್ಗಳು ತಲೆ ಎತ್ತಲಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ಯಾವ ಉದ್ದೇಶವೂ ಇಲ್ಲ ಎಂದ ಅವರು, ಎಲ್ಲ ಭಾಷೆಗಳೂ ಮುಖ್ಯ. ಎಲ್ಲ ಭಾಷೆಗಳಂತೆ ಹಿಂದಿಯೂ ಒಂದಾಗಿದೆ. ಎಲ್ಲ ರಾಜ್ಯಗಳೂ ಆಯಾ ರಾಜ್ಯದ ಸ್ಥಳೀಯ ಹಾಗೂ ಮಾತೃ ಭಾಷೆಗೆ ಆದ್ಯತೆ ನೀಡಲಿವೆ. ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಆರಂಭಿಕ ಪ್ರಯತ್ನಗಳನ್ನು ಮಾಡಲಾಗಿದೆ. ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಲಭಿಸಬೇಕು ಎಂಬುದು ಶಿಕ್ಷಣ ನೀತಿಯ ಸಾರವಾಗಿದೆ ಎಂದರು.

- Advertisement -

ಭವಿಷ್ಯದಲ್ಲಿ ಹೈಡ್ರೋಜನ್ ಸುಸ್ಥಿರ ಇಂಧನ ಮೂಲವಾಗಲಿದೆ. ಉತ್ತಮ ಮಾರುಕಟ್ಟೆಯೂ ಇದೆ. ಉತ್ಪಾದನೆಯಿಂದ ವಿತರಣೆಯವರೆಗೆ ಬಹಳಷ್ಟು ಅವಕಾಶಗಳಿವೆ. ಎನ್.ಐ.ಟಿ.ಕೆ.ಯಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಸಂತಸದ ವಿಚಾರ ಎಂದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಸಾಮಥ್ರ್ಯವರ್ಧನೆಯ ಜೊತೆ ಜಾಗತಿಕ ಸವಾಲುಗಳನ್ನು ಎದುರಿಸಿ ಬೆಳೆಯಲು ಎನ್.ಐ.ಟಿ.ಕೆ ಸಮರ್ಥವಾಗಿದೆ ಎಂದೂ ಹೇಳಿದರು.

ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ವೈ. ಎ. ನಾರಾಯಣ ಸ್ವಾಮಿ, ಎನ್ಐಟಿಕೆ ನಿರ್ದೇಶಕ ಪ್ರೊ.ಪ್ರಸಾದ್ ಕೃಷ್ಣ, ಕುಲಸಚಿವ ಪ್ರೊ.ಕೆ.ರವೀಂದ್ರನಾಥ್, ಕೇಂದ್ರೀಯ ಸಂಶೋಧನಾ ಸೌಲಭ್ಯದ ಅಧ್ಯಕ್ಷ ಪ್ರೊ.ಎಂ.ಎನ್. ಸತ್ಯನಾರಾಯಣ ಗೋಷ್ಠಿಯಲ್ಲಿದ್ದರು.



Join Whatsapp