ನವದೆಹಲಿ : ರಾಸ್ ಅಲ್ ಖೈಮಾದ ಯಾನಿಸ್ ವರ್ವತದಲ್ಲಿ ಶುಕ್ರವಾರ ಕಾಣೆಯಾಗಿದ್ದ ಭಾರತೀಯ ಬಾಲಕನನ್ನು ಅಲ್ಲಿನ ಪೊಲೀಸರು ರಕ್ಷಿಸಿದ್ದಾರೆ. ಈ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.
ನಾಪತ್ತೆಯಾಗಿದ್ದ ಬಾಲಕ ಉತ್ತಮ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕ ನಾಪತ್ತೆಯಾದ ಬಳಿಕ ಆತನ ಹೆತ್ತವರು ತೀವ್ರ ಕಳವಳಗೊಂಡಿದ್ದರು.
ರಾಸ್ ಅಲ್ ಖೈಮಾದ ಪೊಲೀಸರು ಮತ್ತು ನಾಗರಿಕ ರಕ್ಷಣಾ ಇಲಾಖೆ ಮತ್ತಿತರ ಹಲವು ಸಂಸ್ಥೆಗಳು ಎಡೆಬಿಡದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಜೆಬೆಲ್ ಯೆನ್ಸ್ ಪರ್ವತ ಪ್ರಾಂತ್ಯದ ಬಳಿ ಪ್ರವಾಸದಲ್ಲಿದ್ದಾಗ ತಮ್ಮ ಮಗನನ್ನು ಕಳೆದುಕೊಂಡಿರುವುದಾಗಿ ಕುಟುಂಬ ಶುಕ್ರವಾರ ಮಧ್ಯಾಹ್ನ ನಂತರ ಪೊಲೀಸರಿಗೆ ಮಾಹಿತಿ ನೀಡಿತ್ತು.
ವಿಷಯ ಗೊತ್ತಾಗುತ್ತಿದ್ದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾದವು. ಸುಮಾರು ೧೨ ಗಂಟೆಗಳ ಹುಡುಕಾಟದ ಬಳಿಕ ಹಝ್ಝಾ ಫಝ್ಝಾ ಅಡ್ವೆಂಚರ್ ಟೀಂಗೆ ಬಾಲಕ ಪತ್ತೆಯಾಗಿದ್ದಾನೆ. ಬೆಳಗ್ಗೆ ೬ ಗಂಟೆ ಸುಮಾರಿಗೆ ಬಾಲಕ ನಿದ್ದೆಯಲ್ಲಿರುವುದು ಪತ್ತೆಯಾಗಿತ್ತು. ಸಣ್ಣಪುಟ್ಟ ತರಚು ಗಾಯಗಳಲ್ಲದೆ ಬಾಲಕನಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ. ಬಳಿಕ ಬಾಲಕನನ್ನು ಹೆತ್ತವರಿಗೆ ಒಪ್ಪಿಸಲಾಯಿತು.