January 19, 2021
ಶಿಕಾಗೊ | ಕೋವಿಡ್ 19ಗೆ ಹೆದರಿ ವಿಮಾನ ನಿಲ್ದಾಣದಲ್ಲೇ 3 ತಿಂಗಳು ಅಡಗಿ ಕುಳಿತಿದ್ದ ಭಾರತೀಯನ ಬಂಧನ

ಲಾಸ್ ಏಂಜಲೀಸ್ : ಕೋವಿಡ್ 19 ಸೋಂಕು ತಗಲುವ ಭಯದಿಂದ ಸುಮಾರು ಮೂರು ತಿಂಗಳ ಕಾಲ ಯಾರಿಗೂ ತಿಳಿಯದಂತೆ ಶಿಕಾಗೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.
ಲಾಸ್ ಏಂಜಲೀಸ್ ನ ಉಪನಗರದ ನಿವಾಸಿಯಾಗಿರುವ ಆದಿತ್ಯ ಸಿಂಗ್ (36) ಅ.19ರಿಂದ ಶಿಕಾಗೊದ ಓಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ಕಳೆದ ಶನಿವಾರ ಆತನನ್ನು ಬಂಧಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿನ ನಿರ್ಬಂಧಿತ ಪ್ರದೇಶದೊಳಕ್ಕೆ ಕಾನೂನು ಬಾಹಿರವಾಗಿ ಪ್ರವೇಶಿಸಿದ್ದ ಮತ್ತು ಅಸಭ್ಯತೆ, ಕಳ್ಳತನ ಆರೋಪ ಸಿಂಗ್ ವಿರುದ್ಧ ದಾಖಲಿಸಲಾಗಿದೆ.
ಓಹರೆ ವಿಮಾನ ನಿಲ್ದಾಣದಲ್ಲಿ ಭದ್ರತಾ ವಲಯದಲ್ಲಿ ಪತ್ತೆಯಾಗದಂತೆ ವಾಸಿಸಿರುವುದಾಗಿ ಪ್ರಾಸಿಕ್ಯೂಟರ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.