ಟೋಕಿಯೋ, ಜು.30: ಭಾರತೀಯ ಮಹಿಳಾ ಹಾಕಿ ತಂಡ ಶುಕ್ರವಾರ ಐರ್ಲೆಂಡ್ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದೆ. ಆ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಗೆಲುವಿನ ಸಂಭ್ರಮವನ್ನಾಚರಿಸಿತು. ಜೊತೆಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿತು.
ಗುಂಪು ಹಂತದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಣಿ ರಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಐರ್ಲೆಂಡ್ ವಿರುದ್ಧ ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟವನ್ನೇ ನಡೆಸಿತು. ಪಂದ್ಯದ ಕೊನೆಯ ಹಂತದವರೆಗೂ ಎರಡೂ ತಂಡಗಳ ಆಟಗಾರರಿಗೆ ಗೋಲ್ ಬಾರಿಸಲು ಸಾಧ್ಯವಾಗಿರಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ನವನೀತ್ ಕೌರ್ 57ನೇ ನಿಮಿಷದಲ್ಲಿ ಗೋಲು ಬಾರಿಸುವುದರ ಮೂಲಕ ಭಾರತ ತಂಡ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿತು.
ಇತ್ತ ಭಾರತೀಯ ಮಹಿಳಾ ಹಾಕಿ ತಂಡ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದ್ದರೆ ಅತ್ತ ಭಾರತೀಯ ಪುರುಷರ ಹಾಕಿ ತಂಡ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ.