ಉತ್ತರ ಪ್ರದೇಶ: ಸ್ವ ಇಚ್ಛೆಯ ಮದುವೆಗೆ ಲವ್ ಜಿಹಾದ್ ಲೇಪ

Prasthutha|

ಲಕ್ನೊ, ಜು.30: ಸ್ವ ಇಚ್ಛೆಯಿಂದ ಅಂತಧರ್ಮೀಯ ಯುವಕನನ್ನು ಮದುವೆಯಾಗಲು ಮುಂದಾಗಿದ್ದ ಯುವತಿಗೆ ಬೆದರಿಕೆ ಹಾಕಿ ಮದುವೆ ನಿಲ್ಲಿಸಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿವಂತೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

- Advertisement -


ಇದು ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ಎಂದು ಆರೋಪಿಸಿದ ಕರ್ಣಿ ಸೇನೆಯ ಕಾರ್ಯಕರ್ತರು ಮದುವೆ ತಡೆದು ಬೆದರಿಕೆ ಹಾಕಿ ಮದುವೆ ನಿಲ್ಲಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.


ಹಿಂದುತ್ವವಾದಿಗಳು ಯುವತಿಯನ್ನು ಕೋತ್ವಾಲಿ ಪೊಲೀಸ್ ಠಾಣೆಗೆ ಬಲವಂತವಾಗಿ ಹೋಗುವಂತೆ ಮಾಡಿದರು. ಅಲ್ಲಿ ಪೊಲೀಸರು ಮಧ್ಯಪ್ರವೇಶಿಸಿ 18 ವರ್ಷದ ಯುವತಿಯನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಿದರು. ಬುಧವಾರ ಈ ಘಟನೆ ನಡೆದಿದೆ.
ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಆಕೆಯ ತಂದೆಯ ದೂರಿನ ಮೇರೆಗೆ ನಾವು ಪ್ರಕರಣ ದಾಖಲಿಸಿದ್ದೇವೆ. ನಾವು ಆಕೆಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ, ಅಲ್ಲಿ ಅವಳು ತನ್ನ ಹೇಳಿಕೆಯನ್ನು ನೀಡಲಿದ್ದಾಳೆ. ಯುವತಿ ವಯಸ್ಕರಾಗಿರುವುದರಿಂದ ಆಕೆಯ ಹೇಳಿಕೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಡಾ ತಿಳಿಸಿದ್ದಾರೆ.

- Advertisement -

“ಕೆಲವು ಜನರು ಅಕ್ರಮ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಆ ರೀತಿ ಯಾವುದೂ ಕಂಡುಬಂದಿಲ್ಲ. ಕೆಲವು ಜನರು ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆತಂದು, ಮತಾಂತರದ ಆರೋಪಗಳನ್ನು ಮಾಡಿದ್ದಾರೆ ಎಂದು ಎಸ್.ಪಿ.ತಿಳಿಸಿದ್ದಾರೆ. ಯುವತಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲೇ ಆಕೆಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಎಸ್ಪಿ ಹೇಳಿದರು.


ಈ ಸಂಬಂಧದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಕರ್ಣಿ ಸೇನಾಕ್ಕೆ ಸೇರಿದ ಕೆಲವು ಪುರುಷರು ಯುವತಿಯನ್ನು ತಡೆದು ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿರುವುದು ಕಂಡುಬರುತ್ತದೆ. ದಿಲ್ಶಾದ್ ಸಿದ್ದೀಕ್ (24) ಎಂಬಾತನನ್ನು ಸ್ವ ಇಚ್ಛೆಯಿಂದ ಮದುವೆಯಾಗುತ್ತಿದ್ದೇನೆ ಎಂದು ಯುವತಿ ಹೇಳಿದ್ದಾಳೆ. ತನ್ನನ್ನು ಕರ್ಣಿ ಸೇನಾ ಕಾರ್ಯಕರ್ತ ಎಂದು ಪರಿಚಯ ಮಾಡಿಕೊಳ್ಳುವ ವ್ಯಕ್ತಿಯೋರ್ವ, ಯುವತಿಯೊಂದಿಗೆ “ನಿನ್ನ ಹೆಸರೇನು? ನೀನು ಯಾವ ಜಾತಿಯವಳು? ಹುಡುಗ ಯಾವ ಜಾತಿಗೆ ಸೇರಿದವನು? ಆತ ಮುಸ್ಲಿಮನೇ? ನೀನು ಆತನನ್ನು ಏಕೆ ಮದುವೆಯಾಗುತ್ತಿದ್ದಿ? ” ಎಂದು ಕೇಳುತ್ತಿರುವುದು ವಿಡಿಯೋದಲ್ಲಿದೆ. ಇದಕ್ಕೆ, ಮಹಿಳೆ ತಾನು ದಲಿತ ಸಮುದಾಯಕ್ಕೆ ಸೇರಿದವಳು, ವಯಸ್ಕಳು ಮತ್ತು ಸ್ವ ಇಚ್ಛೆಯಿಂದ ಆತನನ್ನು ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾಳೆ.


ಉಬಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ರಿ ಗ್ರಾಮದ ನಿವಾಸಿ ಸಿದ್ದಿಕಿ ಎಂಬ ಯುವಕನನ್ನೂ ತಂಡ ಪ್ರಶ್ನಿಸಿ ಬೆದರಿಕೆ ಹಾಕಿದೆ. ಆತ ನ್ಯಾಯಾಲಯದ ಆವರಣದಿಂದ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಪೊಲೀಸ್ ಠಾಣೆಯಲ್ಲಿ ಚಿತ್ರೀಕರಿಸಿದ ಮತ್ತೊಂದು ವಿಡಿಯೋದಲ್ಲಿ, ಜನರ ಗುಂಪೊಂದು ಯುವತಿಯೊಂದಿಗೆ “ನಿನ್ನನ್ನು ಬೆಳೆಸಿದ, ಶಿಕ್ಷಣ ನೀಡಿದ ನಿನ್ನ ಹೆತ್ತವರನ್ನು ತೊರೆದು ನೀನು ಹೀಗೆ ಮಾಡಬಹುದೇ ಎಂದು ಕೇಳುತ್ತಿರುವುದು ಕೂಡ ವಿಡಿಯೋದಲ್ಲಿದೆ.

Join Whatsapp