ಇಸ್ಲಾಂ ಅವಮಾನಿಸಿದ ಫ್ರಾನ್ಸ್ ಅಧ್ಯಕ್ಷರ ವೈಯಕ್ತಿಕ ನಿಂದನೆಗೆ ಭಾರತದ ಖಂಡನೆ

Prasthutha|

ನವದೆಹಲಿ : ಇಸ್ಲಾಂ ಮತ್ತು ಪ್ರವಾದಿಯವರನ್ನು ಅವಮಾನಗೊಳಿಸಿದ್ದುದಕ್ಕೆ ಮುಸ್ಲಿಂ ರಾಷ್ಟ್ರಗಳ ಆಕ್ರೋಶಕ್ಕೆ ಗುರಿಯಾಗಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಬೆಂಬಲಕ್ಕೆ ಭಾರತ ನಿಂತಿದೆ. ಭಾರತದಲ್ಲಿ ಈಗಾಗಲೇ ಸಾಕಷ್ಟು ಮುಸ್ಲಿಂ ವಿರೋಧಿ ನೀತಿಗಳನ್ನು ಪ್ರದರ್ಶಿಸಿರುವ ಆಡಳಿತಾರೂಢ ಬಿಜೆಪಿ ಸರಕಾರ, ಇದೀಗ ಫ್ರಾನ್ಸ್ ಅಧ್ಯಕ್ಷರ ಪರವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸಿದೆ. ಮ್ಯಾಕ್ರನ್ ವಿರುದ್ಧದ ವೈಯಕ್ತಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಂತಾರಾಷ್ಟ್ರೀಯ ಭಾಷಣದ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷರ ವಿರುದ್ಧದ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಸಚಿವಾಲಯ ತಿಳಿಸಿದೆ. ತರಗತಿಯಲ್ಲಿ ಪ್ರವಾದಿಯವರ ವಿವಾದಾತ್ಮಕ ಕಾರ್ಟೂನ್ ಪ್ರದರ್ಶಿಸಿದ ಶಿಕ್ಷಕನ ಶಿರಚ್ಛೇಧ ಮಾಡಿದ ಪ್ರಕರಣವನ್ನು ಭಯೋತ್ಪಾದಕ ಚಟುವಟಿಕೆ ಎಂದು ಅಭಿಪ್ರಾಯ ಪಟ್ಟಿರುವ ಸಚಿವಾಲಯ, ಫ್ರಾನ್ಸ್ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಲವಾಗಿ ಬೆಂಬಲಿಸಿದುದಕ್ಕೆ ಮ್ಯಾಕ್ರನ್ ಅವರನ್ನು ವೈಯಕ್ತಿಕವಾಗಿ ಗುರಿ ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

- Advertisement -

ಫ್ರಾನ್ಸ್ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ ಅಧ್ಯಕ್ಷ ಮ್ಯಾಕ್ರನ್ ರನ್ನು ಬೆಂಬಲಿಸಿರುವ ಆಡಳಿತಾರೂಢ ಬಿಜೆಪಿ, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ಭಾರತದಲ್ಲಿ ಸರಕಾರದ ವಿರುದ್ಧ ಮಾತನಾಡಿದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸರಕಾರದ ನೀತಿಯನ್ನು ಟೀಕಿಸಿದವರನ್ನು ಭಯೋತ್ಪಾದನೆ ತಡೆ ಕಾನೂನು, ದೇಶದ್ರೋಹ ಆರೋಪದಲ್ಲಿ ಹತ್ತಿಕ್ಕಲಾಗುತ್ತಿದೆ. ಹೀಗಿದ್ದರೂ, ಆಡಳಿತಾರೂಢ ಬಿಜೆಪಿ ಸರಕಾರ ಇನ್ನೊಂದು ದೇಶದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ.  

ತರಗತಿಯಲ್ಲಿ ಪ್ರವಾದಿಯರ ಕಾರ್ಟೂನ್ ಪ್ರದರ್ಶಿಸಿದ್ದ ಶಿಕ್ಷಕರೊಬ್ಬರ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿ ಫ್ರಾನ್ಸ್ ಅಧ್ಯಕ್ಷರು ಮಾತನಾಡುವಾಗ ಇಸ್ಲಾಂ ಅನ್ನು ಅವಮಾನಿಸಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ, ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿವೆ. ಕೆಲವು ರಾಷ್ಟ್ರಗಳಲ್ಲಿ ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಲಾಗಿದೆ.  

- Advertisement -