ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ‘INDIA’ ಸದಸ್ಯ ಪಕ್ಷಗಳು!

Prasthutha|

ನವದೆಹಲಿ: ಉತ್ತರದ ಮೂರು ರಾಜ್ಯಗಳ ಸೋಲು ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿನ ಕಾಂಗ್ರೆಸ್ ನಾಯಕತ್ವಕ್ಕೆ ಭಾರಿ ಹೊಡೆತ ನೀಡಿದೆ.ಮಧ್ಯಪ್ರದೇಸ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ವಿರುದ್ಧ ‘INDIA’ ಮೈತ್ರಿಕೂಟದ ಸದಸ್ಯ ಪಕ್ಷಗಳು ಮುಗಿಬೀಳಲು ತೊಡಗಿವೆ. ‘INDIA’ ಮೈತ್ರಿಕೂಟ ರಚಿಸಿಕೊಂಡಿದ್ದರೂ, ವಿಧಾನಸಭೆ ಚುನಾವಣೆಗಲ್ಲಿ ಪ್ರಾದೇಶಿಕ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಹುಂಬತನಕ್ಕೆ ಕಾಂಗ್ರೆಸ್ ಕೈ ಹಾಕಿದ್ದೇ ಈ ಸೋಲಿಗೆ ಕಾರಣ ಎಂದು ಮಿತ್ರ ಪಕ್ಷಗಳು ವ್ಯಾಖ್ಯಾನಿಸಿವೆ.

- Advertisement -

‘INDIA’ ಮೈತ್ರಿಕೂಟದ ಇತರ ಸದಸ್ಯರ ಜತೆ ಸೀಟು ಹಂಚಿಕೆ ವ್ಯವಸ್ಥೆ ಮಾಡದೆ ಇರುವುದು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಸೋಲನ್ನು ವ್ಯಾಖ್ಯಾನಿಸಿದ್ದಾರೆ. ಇದು ಕಾಂಗ್ರೆಸ್‌ನ ಸೋಲು, ಜನರ ಸೋಲಲ್ಲ ಎಂದು ಒತ್ತಿ ಹೇಳಿದ್ದಾರೆ.

ಸಮಾಜವಾದಿ ಪಕ್ಷವೂ ಕಾಂಗ್ರೆಸ್ ವಿರುದ್ದ ಕಿಡಿಗಾರಿದ್ದು, ಮಧ್ಯಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಒಪ್ಪಂದಕ್ಕೆ ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್‌ನಿಂದ ಸ್ಪಂದನೆ ದೊರಕಿರಲಿಲ್ಲ. ಮಾತ್ರವಲ್ಲ, ಅಖಿಲೇಶ್ ವಖಿಲೇಶ್ ಎಲ್ಲ ಬಿಡಿ ಎಂದು ಕಮಲ್ ನಾಥ್ ವ್ಯಂಗ್ಯವಾಡಿದ್ದರು. ಕಮಲ್ ನಾಥ್ ಅವರು ಅಖಿಲೇಶ್ ಕುರಿತು ಬಳಸಿದ ಅವಮಾನಕರ ಪದವು ಕಾಂಗ್ರೆಸ್ ಸೋಲಿಗೆ ಕಾರಣ. ಕಾಂಗ್ರೆಸ್ ಘನತೆಯಿಲ್ಲದ ಹೇಳಿಕೆಗಳಿಂದಾಗಿ ಸೋತಿದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ಯಾದವ್ ಕಾಂಗ್ರೆಸ್ ಸೋಲನ್ನು ವ್ಯಾಖ್ಯಾನಿಸಿದ್ದಾರೆ.

- Advertisement -

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ಅದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕೂಡ ಗೆಲ್ಲಬಹುದಾಗಿತ್ತು. ಕೆಲವು ಮತಗಳನ್ನು ಐಎನ್‌ಡಿಐಎ ಪಕ್ಷಗಳು ಒಡೆದಿದ್ದವು. ಇದು ಸತ್ಯ. ನಾವು ಸೀಟು ಹಂಚಿಕೆ ವ್ಯವಸ್ಥೆಯ ಸಲಹೆ ನೀಡಿದ್ದೆವು. ಅವರು ಮತಗಳ ವಿಭಜನೆಯಿಂದಾಗಿ ಸೋತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪ್ರಾದೇಶಿಕ ಪಕ್ಷಗಳು ತಾವು ಪ್ರಬಲವಾಗಿರುವ ಕಡೆ ಒಕ್ಕೂಟವನ್ನು ಮುನ್ನಡೆಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ.

Join Whatsapp