ಶಾಂತಿ ಪ್ರಸ್ತಾಪದ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಆಹ್ವಾನಿಸಿದ ಭಾರತ

Prasthutha|

ನವದೆಹಲಿ: ನಮ್ಮ ದೇಶವು ಭಾರತದೊಂದಿಗಿನ ಮೂರು ಯುದ್ಧಗಳಿಂದ ಸಾಕಷ್ಟು ಪಾಠ ಕಲಿತಿದೆ. ಭಾರತದೊಂದಿಗೆ ಶಾಂತಿಯುತ ಬದುಕನ್ನು ಬಯಸುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಹೇಳಿದ ಬೆನ್ನಿಗೆ ಭಾರತವು ಅಲ್ಲಿನ ವಿದೇಶಾಂಗ ಸಚಿವರಿಗೆ ಆಹ್ವಾನ ನೀಡಿದೆ.


ಗೋವಾದಲ್ಲಿ ಎಸ್’ಸಿಓ- ಶಾಂಘಾಯ್ ಸಹಕಾರ ಒಕ್ಕೂಟದ ವಿದೇಶಾಂಗ ಮಂತ್ರಿಗಳ ಸಮಾವೇಶಕ್ಕೆ ಈ ಆಹ್ವಾನ ನೀಡಲಾಗಿದೆ.

- Advertisement -


ಭಾರತದ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರು ಇಸ್ಲಾಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಅಲ್ಲಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯವರಿಗೆ ಮೇ ಮೊದಲ ವಾರದಲ್ಲಿ ಗೋವಾದಲ್ಲಿ ನಡೆಯುವ ಎಸ್’ಸಿಓ ವಿದೇಶಾಂಗ ಮಂತ್ರಿಗಳ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ.


ಮೇ 4 ಮತ್ತು 5ರಂದು ಈ ಸಮಾವೇಶ ನಡೆಯಲಿದೆ. ಪಾಕಿಸ್ತಾನವು ಈ ಆಹ್ವಾನವನ್ನು ಒಪ್ಪಿಕೊಂಡರೆ 12 ವರ್ಷಗಳ ಬಳಿಕ ನಡೆಯುವ ಮೊದಲ ಭೇಟಿ ಇದಾಗಲಿದೆ. 2011ರ ಜುಲೈಯಲ್ಲಿ ಕೊನೆಯದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಭಾರತಕ್ಕೆ ಭೇಟಿ ನೀಡಿದ್ದರು.


ಎಸ್’ಸಿಓದಲ್ಲಿ ಭಾರತ ಪಾಕಿಸ್ತಾನವಲ್ಲದೆ ಚೀನಾ, ರಷ್ಯಾ, ಕಜಕಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೆಕಿಸ್ತಾನ್ ದೇಶಗಳು ಇವೆ. ಇದೇ ರೀತಿ ಚೀನಾ, ರಷ್ಯಾ ಸಹಿತ ಆ ಎಲ್ಲ ದೇಶಗಳಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಕಾಶ್ಮೀರದ ವಿದೇಶಾಂಗ ಸಚಿವರಿಗೆ ನೀಡಿರುವ ಆಹ್ವಾನವು ವಿಶೇಷವೇಕೆಂದರೆ, ಭಾರತ – ಪಾಕ್ ಪರಸ್ಪರ ಸಂಬಂಧವು ಇಂದು ಹದಗೆಟ್ಟು ನಿಂತಿದೆ.
ಮೊದಲು ನೆರೆಹೊರೆ ಚೆನ್ನಾಗಿರಬೇಕು ಎಂಬ ನಿಯಮವನ್ನು ಭಾರತ ಅನುಸರಿಸುತ್ತದೆ. ಪಾಕಿಸ್ತಾನದೊಂದಿಗೆ ಸಹಜ ಸಂಬಂಧವನ್ನು ಭಾರತ ಬಯಸುತ್ತದೆ. ಉಗ್ರವಾದ ಮತ್ತು ಹಿಂಸಾಚಾರ ಮುಕ್ತವಾದ ಭಾರತ ಪಾಕ್ ಸಂಬಂಧ ವಾತಾವರಣ ಮುಖ್ಯವೆನಿಸುತ್ತದೆ. ಇದು ಈ ದೇಶಗಳ ಭದ್ರತೆ ಮತ್ತು ಪ್ರಾದೇಶಿಕ ಸಾರ್ವಭೌಮತೆಗೆ ಪೂರಕ. ಇದೇ ಮುಕ್ತ ಸೌಹಾರ್ದತೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

- Advertisement -