ಟಿ20 ವಿಶ್ವಕಪ್‌| ಅಭ್ಯಾಸ ಪಂದ್ಯ ಗೆದ್ದ ಟೀಮ್‌ ಇಂಡಿಯಾ

Prasthutha|

ಪರ್ತ್‌: ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಪರ್ತ್‌ನಲ್ಲಿ ನಡೆದ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ 13 ರನ್‌ಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, 6 ವಿಕೆಟ್‌ ನಷ್ಟದಲ್ಲಿ 158 ರನ್‌ಗಳಿಸಿತ್ತು. ಚೇಸಿಂಗ್‌ ವೇಳೆ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದಲ್ಲಿ 145 ರನ್‌ಗಳಿಸಲಷ್ಟೇ ಆತಿಥೇಯ ತಂಡಕ್ಕೆ ಸಾಧ್ಯವಾಯಿತು.

- Advertisement -

ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ್ದ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಜೋಡಿ ದೊಡ್ಡ ಇನ್ನಿಂಗ್ಸ್‌ ಆಡುವಲ್ಲಿ ವಿಫಲರಾದರು. ಕೇವಲ 3 ರನ್​ಗಳಿಸಿ ರೋಹಿತ್ ಶರ್ಮಾ ಮತ್ತು 9 ರನ್ ಗಳಿಕೆಯೊಂದಿಗೆ ರಿಷಭ್ ಪಂತ್  ಪೆವಿಲಿಯನ್ ಸೇರಿದರು. ದೀಪಕ್ ಹೂಡಾ, 22 ರನ್​ಗಳಿಸಿ ನಿರ್ಗಮಿಸಿದರು.  ಆದರೆ  ಭರ್ಜರಿಯಾಗಿ ಬ್ಯಾಟ್‌ ಬೀಸಿದ ಸೂರ್ಯಕುಮಾರ್ ಯಾದವ್, 35 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಯೊಂದಿಗೆ 52 ರನ್​ ಕಲೆಹಾಕಿ ತಂಡಕ್ಕೆ ಆಸರೆಯಾದರು. ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 29 ರನ್​ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 19 ರನ್ ಬಾರಿಸಿದರು.

159 ರನ್​ಗಳ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ಪಶ್ಚಿಮ​ ಆಸ್ಟ್ರೇಲಿಯಾ, ಕೇವಲ 12 ರನ್​ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಸ್ಯಾಮ್ ಫನ್ನಿಂಗ್ ಮತ್ತು ವಿಕೆಟ್‌ ಕೀಪರ್‌ ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ ತಂಡಕ್ಕೆ ಆಸರೆಯಾದರು.

- Advertisement -

53 ಎಸೆತಗಳನ್ನು ಎದುರಿಸಿದ ಸ್ಯಾಮ್‌, 1 ಸಿಕ್ಸರ್‌ ಮತ್ತು 5 ಬೌಂಡರಿಗಳ ನೆರವಿನೊಂದಿಗೆ 59 ರನ್‌ ಮತ್ತು ಬ್ಯಾಂಕ್ರಾಫ್ಟ್‌ 22 ರನ್‌ಗಳಿಸಿದರು. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್​ಗಳಿಸಲಷ್ಟೇ ಶಕ್ತವಾಯಿತು.

ಟೀಮ್ ಇಂಡಿಯಾ ಪರ ಮಿಂಚಿನ ದಾಳಿ ನಡೆಸಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ 3 ಓವರ್​ಗಳಲ್ಲಿ 6 ರನ್​ ನೀಡಿ 3 ವಿಕೆಟ್, ಚಹಾಲ್ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತೆ ದುಬಾರಿಯಾದ ಹರ್ಷಲ್‌ ಪಟೇಲ್‌

ಗಾಯದ ಬಳಿಕ ತಂಡಕ್ಕೆ ಮರಳಿರುವ ಹರ್ಷಲ್‌ ಪಟೇಲ್‌ ತನ್ನ ಹಿಂದಿನ ಲಯ ಕಳೆದುಕೊಂಡಿರುವುದು ಮತ್ತೆ ಸಾಬೀತಾಗಿದೆ. ಅಭ್ಯಾಸ ಪಂದ್ಯದಲ್ಲೂ ತನ್ನ 4 ಓವರ್ಗಳ ದಾಳಿಯಲ್ಲಿ ಪಟೇಲ್‌ 49 ರನ್‌ ಬಿಟ್ಟುಕೊಟ್ಟು ದುಬಾರಿ ಬೌಲರ್‌ ಎನಿಸಿದರು.

ಅಕ್ಟೋಬರ್‌ 17ರಂದು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ, ತನ್ನ 2ನೇ ಅಭ್ಯಾಸ ಪಂದ್ಯವನ್ನು ಆಡಲಿದೆ.



Join Whatsapp