ಟಿ-20 ಸರಣಿ: ಪಂತ್‌ ಪಡೆಗೆ ಭರ್ಜರಿ ಗೆಲುವು, ಸರಣಿ ಸಮಬಲ

Prasthutha|

ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಪಂತ್ ಪಡೆ 82 ರನ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಆಮೂಲಕ ಐದು ಪಂದ್ಯಗಳ ಸರಣಿ 2-2ರಲ್ಲಿ ಸಮಬಲಗೊಂಡಿದ್ದು, ಭಾನುವಾರ ಬೆಂಗಳೂರಿನಲ್ಲಿ ʻಫೈನಲ್” ಪಂದ್ಯ ನಡೆಯಲಿದೆ. 

- Advertisement -

ಸೌರಾಷ್ಟ್ರ ಕ್ರಿಕೆಟ್ ಮೈದಾನಲ್ಲಿ ಶುಕ್ರವಾರ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ದಿನೇಶ್ ಕಾರ್ತಿಕ್ ಗಳಿಸಿದ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 169 ರನ್‌ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆಂಬತ್ತಿದ ತೆಂಬ ಬವುಮಾ ಪಡೆ, ಆವೇಶ್ ಖಾನ್ ಬೌಲಿಂಗ್ ಎದುರು ನಿಲ್ಲಲಾಗದೆ, ಕೇವಲ 87 ರನ್‌ಗಳಿಸುವಷ್ಟರಲ್ಲೇ ಇನ್ನಿಂಗ್ಸ್ ಮುಗಿಸಿತ್ತು. 

8 ರನ್‌ಗಳಿಸಿದ್ದ ವೇಳೆ ಗಾಯಗೊಂಡು ದಕ್ಷಿಣ ಆಫ್ರಿಕಾ ನಾಯಕ ರಿಟೈರ್ಯ್ಡ್ ಹರ್ಟ್ ಆದರು. 4ನೇ ಓವರ್‌ನಲ್ಲಿ ಒಂಟಿ ರನ್ ತೆಗೆಯುವ ಪ್ರಯತ್ನದಲ್ಲಿ ನಾನ್‌ ಸ್ಟ್ರೈಕ್‌ ಕಡೆಯಲ್ಲಿ ಡೈವ್ ಮಾಡಿದ್ದ ಬವುಮಾ, ಎಡ ಮೊಣಕೈಗೆ ಗಾಯಕ್ಕೆ ತುತ್ತಾಗಿ ಮೈದಾನ ತೊರೆದರು. ಆಫ್ರಿಕಾ ಪರ 20 ರನ್‌ಗಳಿಸಿದ ವೆನ್ ಡೆರ್ ಡುಸ್ಸೆನ್ ಟಾಪ್ ಸ್ಕೋರರ್ ಎನಿಸಿದರು. ಉಳಿದಂತೆ ಡಿ ಕಾಕ್ 14, ಜಾನ್ಸೆನ್ 12 ಮತ್ತುಡೇವಿಡ್ ಮಿಲ್ಲರ್ 9 ರನ್‌ಗಳಕೊಡುಗೆಯನ್ನಷ್ಟೇ ನೀಡಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ನಿರ್ಗಮಿಸಿದ್ದು, ಆಫ್ರಿಕಾ ಪಾಲಿಗೆ  ಹಿನ್ನಡೆಯಾಯಿತು.

- Advertisement -

ಭಾರತದ ಪರ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ವೇಗಿ ಆವೇಶ್ ಖಾನ್, 4 ಓವರ್‌ಗಳ ದಾಳಿಯಲ್ಲಿ 18 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಪಡೆದರು. ಸ್ಪಿನ್ನರ್ ಯಜುವೇಂದ್ರ ಚಾಹಲ್ 2 ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಗಳಿಸಿದರು. 

ದಿನೇಶ್‌ ಕಾರ್ತಿಕ್‌ ಬಿರುಸಿನ ಅರ್ಧಶತಕ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಆಧಾರ ಸ್ತಂಭವಾಗಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ (31 ಎಸೆತಗಳಲ್ಲಿ 46 ರನ್) ಮತ್ತು ದಿನೇಶ್ ಕಾರ್ತಿಕ್ (27 ಎಸೆತಗಳಲ್ಲಿ 55 ರನ್) ಗಳಿಸಿ ಕುಸಿದಿದ್ದ ತಂಡಕ್ಕೆ ಆಸರೆಯಾದರು. 

ಇನ್ನಿಂಗ್ಸ್ ಆರಂಭಿಸಿದ್ದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. 5 ರನ್ ಗಳಿಸಿದ್ದ ಗಾಯಕ್ವಾಡ್, ಲುಂಗಿ ಎನ್ಗಿಡಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ (4) ಕೂಡ  ನಿರಾಸೆ ಮೂಡಿಸಿದ್ದರು.  ಸರಣಿಯುದ್ದಕ್ಕೂ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ (27) ಅಬ್ಬರಿಸುವ ಸೂಚನೆ ನೀಡುತ್ತಿರುವಾಗಲೇ ಅನ್ರಿಚ್ ನಾರ್ಟ್ಜೆ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಾಯಕ ರಿಷಭ್ ಪಂತ್ (17) ನಿರ್ಣಾಯಕ ಪಂದ್ಯದಲ್ಲೂ ವಿಫಲರಾದರು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಲುಂಗು ಎನ್ಗಿಡಿ 3 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್ ಪಡೆದರು.

Join Whatsapp