ಲಾರ್ಡ್ಸ್‌|ಮೂರನೇ ಏಕದಿನ ಪಂದ್ಯದಲ್ಲಿ 169 ರನ್‌ಗಳಿಗೆ ಭಾರತ ಆಲೌಟ್‌

Prasthutha|

ಇಂಗ್ಲೆಂಡ್‌ ಮಹಿಳಾ ತಂಡದ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ 169 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಗಿದೆ.

- Advertisement -

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ಇಂಗ್ಲೆಂಡ್‌, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆದರೆ ವೇಗಿ ಕಾಟೆ ಕ್ರೀಸ್‌ ದಾಳಿಗೆ ಕುಸಿದ ಭಾರತ, 45.4 ಓವರ್‌ಗಳಲ್ಲಿ 169 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿದೆ.

ಭಾರತದ 8 ಮಂದಿ ಬ್ಯಾಟರ್‌ಗಳು ಎರಡಂಕಿಯ ಮೊತ್ತವನ್ನೇ ದಾಟಲಿಲ್ಲ. ಅದರಲ್ಲೂ ಐವರು ಬ್ಯಾಟರ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿ ಮರಳಿದ್ದು ದುಬಾರಿಯಾಯಿತು. ಆರಂಭಿಕ ಆಟಗಾತಿ ಸ್ಮೃತಿ ಮಂದಾನ ಮತ್ತು ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಗಳಿಸಿದ ಅರ್ಧಶತಕಗಳ ನೆರವಿನಿಂದ ತಂಡದ ಮೊತ್ತ 150 ದಾಟಿತು. ಇತರೆ ರೂಪದಲ್ಲಿ ಇಂಗ್ಲೆಂಡ್‌ ಬೌಲರ್‌ಗಳು 20 ರನ್‌ (1 ಬೈ, 5 ಲೆಗ್‌ ಬೈ, 13 ವೈಡ್‌) ನೀಡಿದ್ದು ಭಾರತಕ್ಕೆ ವರವಾಯಿತು.

- Advertisement -

ಸ್ಮೃತಿ ಮಂದಾನ 79 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 50 ರನ್‌ ಗಳಿಸಿದರು. ದೀಪ್ತಿ ಶರ್ಮಾ 68 ರನ್‌ ಗಳಿಸಿ ( 106 ಎಸೆತ, 7 ಬೌಂಡರಿ) ಅಜೇಯರಾಗುಳಿದರು. ಅಂತಿಮ ಪಂದ್ಯವನ್ನಾಡಿದ ಜೂಲನ್‌ ಗೋಸ್ವಾಮಿ, ರೇಣುಕಾ ಸಿಂಗ್‌, ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ಶೂನ್ಯ ಸುತ್ತಿದರು.

ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಮಿಂಚಿದ ಕಾಟೆ ಕ್ರೀಸ್‌, 10 ಓವರ್‌ ಸ್ಪೆಲ್‌ನಲ್ಲಿ ಕೇವಲ 26 ರನ್‌ ನೀಡಿ, ಪ್ರಮುಖ 4 ವಿಕೆಟ್‌ ಪಡೆದರು. ಫ್ರೇಯಾ ಕೆಂಪ್‌ ಮತ್ತು ಸೋಫಿ ಎಕ್ಲಾಸ್ಟೊನ್‌ ತಲಾ 2 ವಿಕೆಟ್‌ ಪಡೆದರು. ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್ ಕೌರ್ ಬಳಗ ಈಗಾಗಲೇ ಸರಣಿಯನ್ನು ತನ್ನದಾಗಿಸಿದೆ. ಆ ಮೂಲಕ 23 ವರ್ಷಗಳ ಬಳಿಕ, ಆಂಗ್ಲರ ನೆಲದಲ್ಲಿ, ಭಾರತದ ಮಹಿಳಾ ತಂಡ ಏಕದಿನ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ.

ಹೋವ್‌ನಲ್ಲಿ ನಡೆದಿದ್ದ ಸರಣಿಯ ಮೊದಲನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ, ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.  ಕ್ಯಾಂಟರ್ಬರಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, 88 ರನ್ ಅಂತರದಲ್ಲಿ ಅಮಿ ಜಾನ್ಸ್ ಬಳಗವನ್ನು ಮಣಿಸಿ ಸರಣಿ ಗೆಲುವನ್ನು ಖಾತ್ರಿಪಡಿಸಿತ್ತು.  

ಏಕದಿನ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಇಂಗ್ಲೆಂಡ್ ತಂಡಕ್ಕೆ ಶರಣಾಗಿತ್ತು.

Join Whatsapp