ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ನಿಯಂತ್ರಿಸಿದ್ದ ಭಾರತ, ಆ ಬಳಿಕ 5 ವಿಕೆಟ್ ನಷ್ಟದಲ್ಲಿ ಕೇವಲ ಎರಡು ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನು ಗೆದ್ದು ಸಂಭ್ರಮಿಸಿತ್ತು.
ಬೌಲಿಂಗ್‌ನಲ್ಲಿ ಪ್ರಮುಖ ಮೂರು ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯಾ, ಆ ಬಳಿಕ ಬ್ಯಾಟಿಂಗ್‌ನಲ್ಲೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ (33 ರನ್) ಆಡಿದ್ದರು. ಅಂತಿಮವಾಗಿ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದು, ಪಂದ್ಯಕ್ಕೂ ಮುನ್ನ ದೊಡ್ಡ ಸುದ್ದಿಯಾಗಿತ್ತು. ಬ್ಲ್ಯಾಕ್‌ನಲ್ಲಿ ₹1 ಲಕ್ಷದ 20 ಸಾವಿರದವರೆಗೂ ಪಂದ್ಯದ ಟಿಕೆಟ್ ಮಾರಾಟವಾಗಿತ್ತು.
ಆದರೆ ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯವನ್ನು ಡಿಜಿಟಲ್ ತಾಣದ ಮೂಲಕ ವೀಕ್ಷಿಸಿದವರ ಸಂಖ್ಯೆಯಲ್ಲೂ ಹೊಸ ದಾಖಲೆ ನಿರ್ಮಾಣವಾಗಿದೆ. ಭಾರತ- ಪಾಕಿಸ್ತಾನ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಏಕಕಾಲಕ್ಕೆ 1 ಕೋಟಿ 30 ಲಕ್ಷ ಮಂದಿ ವೀಕ್ಷಿಸಿದ್ದಾರೆ. ವಿಶೇಷವೆಂದರೆ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ಡರಾಝ್ ಆಪ್‌ನಲ್ಲೂ ಭಾರತ- ಪಾಕಿಸ್ತಾನ ಪಂದ್ಯವನ್ನು ಏಕಕಾಲಕ್ಕೆ 1 ಕೋಟಿ 30 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಡಿಜಿಟಲ್ ತಾಣದ ಇತಿಹಾಸದಲ್ಲೇ ಭಾರತ- ಪಾಕಿಸ್ತಾನ ಪಂದ್ಯ ವೀಕ್ಷಕರ ಸಂಖ್ಯೆಯಲ್ಲಿ ಇದು ಹೊಸ ದಾಖಲೆಯಾಗಿದೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಅತಿಹೆಚ್ಚು ವೀಕ್ಷಕರನ್ನು ಸೆಳೆದ ಎರಡನೇ ಪಂದ್ಯ ಎಂಬ ದಾಖಲೆ ಭಾರತ- ಪಾಕಿಸ್ತಾನ ಪಂದ್ಯದ್ದಾಗಿದೆ.
2019ರ ಚೆನ್ನೈ ಸೂಪರ್ ಕಿಂಗ್ಸ್– ಮುಂಬೈ ಇಂಡಿಯನ್ಸ್ ನಡುವಿನ ಫೈನಲ್ ಪಂದ್ಯವು ದಾಖಲೆ ವೀಕ್ಷಕರನ್ನು ಸೆಳೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. 12ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಒಂದು ಕೋಟಿ 86 ಲಕ್ಷ ಮಂದಿ ವೀಕ್ಷಿಸಿದ್ದರು. ಅದೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು 1 ಕೋಟಿ 20 ಲಕ್ಷ ಮಂದಿ ಏಕಕಾಲಕ್ಕೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಿದ್ದರು.