ಪ್ಯಾರಿಸ್: ಜಿನೇವಾದಿಂದ ಪ್ಯಾರಿಸ್‌ಗೆ ಹಾರುತ್ತಿದ್ದ ಏರ್ ಫ್ರಾನ್ಸ್ ವಿಮಾನದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಪರಸ್ಪರ ಹೊಡೆದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೂನ್‌ನಲ್ಲಿ ಈ ಘಟನೆ ನಡೆದಿದ್ದು, ಆಂತರಿಕ ತನಿಖೆ ನಡೆಸಿ, ಇತ್ತೀಚೆಗೆ ಈ ಇಬ್ಬರು ಪೈಲಟ್‌ಗಳನ್ನು ಅಮಾನತುಗೊಳಿಸಿ ಫ್ರೆಂಚ್ ವಿಮಾನಯಾನ ಪ್ರಾಧಿಕಾರ ಆದೇಶಿಸಿದ ಬೆನ್ನಲ್ಲೇ ಘಟನೆ ಬೆಳಕಿಗೆ ಬಂದಿದೆ.
ವಿಮಾನ ಟೇಕಾಫ್ ಆದ ಕೆಲವೇ ಸಮಯದ ಬಳಿಕ ಪೈಲಟ್ ಮತ್ತು ಸಹ ಪೈಲಟ್ ಯಾವುದೋ ವಿಚಾರಕ್ಕೆ ಕಾಕ್‌ಪೀಟ್‌ನಲ್ಲೇ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಕಾಲರ್ ಹಿಡಿದು ಎಳೆದಾಡಿದ್ದಲ್ಲದೇ, ಮುಖಕ್ಕೆ ಗುದ್ದಿ ಕಾದಾಡಿದ್ದಾರೆ. ಈ ನಡುವೆ ಕಾಕ್‌ಪೀಟ್‌ನಿಂದ ಗದ್ದಲ ಕೇಳಿ ಕ್ಯಾಬಿನ್ ಸಿಬ್ಬಂದಿ ಬಂದಿದ್ದು, ಇಬ್ಬರ ಜಗಳ ಬಿಡಿಸಿದ್ದಾರೆ. ಬಳಿಕ ವಿಮಾನ ಕೆಳಗಿಳಿಯುವ ವರೆಗೂ ಆ ಸಿಬ್ಬಂದಿ ಡೆಕ್‌ನಲ್ಲೇ ಉಳಿದಿದ್ದರು.
ಹೊಡೆದಾಟ ವಿಮಾನದಲ್ಲಿದ್ದ ಪ್ರಯಾಣಿಕರ ಮೇಲೆ ಬಾಧಿಸದಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ತಡವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.