ಮಂಡ್ಯ : ಮಕ್ಕಳು ಜೀವನದಲ್ಲಿ ಓದುವುದರ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಜತೆ ಜತೆಗೆ ಕಲಿಕೆಯ ಹಂತದಲ್ಲೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಪರಿಪೂರ್ಣ ಮನುಷ್ಯರಾಗಿ ಬೆಳೆಯಲು ಸಾಧ್ಯ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ಅವರು ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಡ್ಯ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದಡಿಯಲ್ಲಿ ಮೈಸೂರು ವಿಭಾಗದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 2023 ಆಗಸ್ಟ್ 17,18,19 ರ 3 ದಿನಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಕ್ಕಳಲ್ಲಿ ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು. ಪ್ರಕೃತಿ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಸ್ವಸ್ಥ್ಯವನ್ನು ಹೆಚ್ಚಿಸುವ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಸಮಾಜ ಸೇವೆಯ ಕಾರ್ಯಕ್ಕೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಕ್ಕಳಲ್ಲಿ ಸಮಾಜ ಸೇವೆ ಮಾಡುವ ಹಾಗೂ ಆರೋಗ್ಯದಲ್ಲಿ ಜಾಗೃತಿ ವಹಿಸುವ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ತಮ್ಮ ಸಹಪಾಠಿಗಳಿಗೆ ಆರೋಗ್ಯದಲ್ಲಿ ಏರುಪೇರದಾಗ ತಕ್ಷಣ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಎಂದು ಸಹ ಕಲಿಸುತ್ತದೆ ಎಂದರು.
ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಗುಣಮಟ್ಟ ಶಿಕ್ಷಣ ನೀಡುತ್ತದೆ. ಇದಕ್ಕಾಗಿ ನಾನು ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತೇನೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆಗೈದು ಮಾನವೀಯ ಮೌಲ್ಯ ರೂಢಿಸಿಕೊಂಡು ವಿಶ್ವಮಾನವರಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಮಾಹಿತಿ ಒದಗಿಸುವ ಕೈಪಿಡಿ ಬಿಡುಗಡೆಗೊಳಿಸಿ, ಆರೋಗ್ಯ ಕಿಟ್ ವಿತರಿಸಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ, ಮಕ್ಕಳಲ್ಲಿ ಸಮಾಜಿಕ ಕಳಕಳಿಯನ್ನು ಹೇಗೆ ಬೆಳೆಸಬೇಕು. ಚಿಂತನೆ, ದೇಶಭಕ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮೈಗೂಡಿಸಿಕೊಳ್ಳುವುದು ಹೇಗೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ತರಬೇತಿ ನೀಡುತ್ತದೆ. ಇದನ್ನು ಕಲಿತ ಮಕ್ಕಳು ಸಮಾಜಕ್ಕೆ ಮಾದರಿಯಾಗಬಲ್ಲರು ಎಂದರು.
ಆರೋಗ್ಯ ಸೇವೆ ಹಾಗೂ ವಿಪತ್ತನ್ನು ಎದುರಿಸಲು ರೆಡ್ ಕ್ರಾಸ್ ಸಂಸ್ಥೆ ನೆರವಾಗುತ್ತದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸಮಾಜಕ್ಕೆ ಮಾದರಿಯಾಗಿದನ್ನು ನಾವೆಲ್ಲಾ ನೋಡಿದ್ದೇವೆ. ರೆಡ್ ಕ್ರಾಸ್ ಸಂಸ್ಥೆಗೆ ಬಂದವರು ವೈಯಕ್ತಿಕ ಹಿತಾಸಕ್ತಿ ಬಿಟ್ಟು ಸಾರ್ವಜನಿಕ ಹಿತಾಸಕ್ತಿಗಾಗಿ ಡುಡಿಯುತ್ತಾರೆ ಇದು ನಿಜಕ್ಕೂ ಪ್ರಶಂಸನೀಯ ಎಂದರು.
ಸರ್ಕಾರದಲ್ಲಿ ಪ್ರಸ್ತುತ ಎಲ್ಲಾ ಇಲಾಖೆಗಳಲ್ಲಿ ಬದಲಾವಣೆ ಹೆಜ್ಜೆ ಇಡಲಾಗುತ್ತಿದೆ. ಯಾವುದೇ ಲೋಪವಿಲ್ಲದೆ ಸರ್ಕಾರದ ಗ್ಯಾರಂಟಿಗಳು, ಸಾಮಾಜಿಕ ಸೇವೆಗಳು, ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕೋಶಾಧ್ಯಕ್ಷ ಆನಂದ ಜಿಗಜಿನ್ನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಶಾಸಕ ಮರಿತಿಬ್ಬೆಗೌಡ, ಮಧು ಜಿ ಮಾದೇಗೌಡ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.